ಜಮ್ಮು ಕಾಶ್ಮೀರ: 12 ವರ್ಷದ ಕೆಳಗಿನ ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ
ಆಧ್ಯಾದೇಶಕ್ಕೆ ರಾಜ್ಯಪಾಲ ಅನುಮೋದನೆ

ಶ್ರೀನಗರ, ಮೇ 18: ಮಹಿಳೆಯರ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ನಿಯಂತ್ರಿಸಲು ಜಮ್ಮು ಕಾಶ್ಮೀರ ರಾಜ್ಯಪಾಲ ಎನ್.ಎನ್. ವೊಹ್ರಾ ಗುರುವಾರ ಎರಡು ಆಧ್ಯಾದೇಶಗಳಿಗೆ ಅನುಮೋದನೆ ನೀಡಿದ್ದಾರೆ. ಇದರಲ್ಲಿ ಒಂದು 12 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳಿಗೆ ಮರಣ ದಂಡನೆ ವಿಧಿಸುವುದು.
ಜಮ್ಮು ಹಾಗೂ ಕಾಶ್ಮೀರ ಲೈಂಗಿಕ ಹಿಂಸಾಚಾರದಿಂದ ಮಕ್ಕಳ ರಕ್ಷಣಾ ಆಧ್ಯಾದೇಶ 2018 ಹಾಗೂ ಜಮ್ಮು ಹಾಗೂ ಕಾಶ್ಮೀರ ಕ್ರಿಮಿನಲ್ ಕಾನೂನು (ತಿದ್ದುಪಡಿ) ಆಧ್ಯಾದೇಶ 2018 ಗುರುವಾರದಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಜಮ್ಮು ಹಾಗೂ ಕಾಶ್ಮೀರ ಸೇರಿದಂತೆ ದೇಶದ ವಿವಿಧ ರಾಜ್ಯಗಳಲಿ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ನಿರ್ದಿಷ್ಟವಾಗಿ ಲೈಂಗಿಕ ಹಿಂಸಾಚಾರ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತಂದಂತೆ ರಾಜ್ಯದಲ್ಲಿ ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ ತರುವ ಅಗತ್ಯತೆ ಇತ್ತು.
12 ವರ್ಷಕ್ಕಿಂತ ಕೆಳಗಿನ ವರ್ಷದ ಮಕ್ಕಳ ಮೇಲಿನ ಅತ್ಯಾಚಾರ ಅಪರಾಧಿಗಳಿಗೆ ಮರಣದಂಡನೆ ವಿಧಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ತಿಂಗಳು ಆಧ್ಯಾದೇಶಕ್ಕೆ ಅನಮೋದನೆ ನೀಡಿತ್ತು.





