ವಿಶ್ವಾಸಮತಯಾಚನೆ ಮಾಡದೆ ಸಿಎಂ ಹುದ್ದೆಗೆ ರಾಜೀನಾಮೆ ಘೋಷಿಸಿದ ಯಡಿಯೂರಪ್ಪ
55 ಗಂಟೆಗಳಲ್ಲೇ ಉರುಳಿದ ನೂತನ ಸರಕಾರ

ಬೆಂಗಳೂರು, ಮೇ 19: ‘ವಿಶ್ವಾಸಮತ ಯಾಚಿಸದೆ ರಾಜಭವನಕ್ಕೆ ತೆರಳಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಪ್ರಕಟಿಸಿದರು. ಆ ಬಳಿಕ ತಮ್ಮ ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಇದರಿಂದ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಮೂರೇ ದಿನಗಳಲ್ಲಿ ಉರುಳಿದಂತಾಗಿದೆ.
ಶನಿವಾರ ಮಧ್ಯಾಹ್ನ ವಿಧಾನಸಭೆಯಲ್ಲಿ ‘ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸುವ ಪ್ರಸ್ತಾವ’ ಮಂಡಿಸಿ ಮಾತನಾಡಿದ ಅವರು, ಯಾರ ಮರ್ಜಿಯಲ್ಲಿಯೂ ರಾಜಕಾರಣ ಮಾಡುವವನು ನಾನಲ್ಲ ಎಂದು ಇದೇ ವೇಳೆ ನುಡಿದರು.
‘ಕಾಂಗ್ರೆಸ್ ಸ್ನೇಹಿತರ ಕುತಂತ್ರದಿಂದ ಪ್ರಜಾತಂತ್ರಕ್ಕೆ ಹಿನ್ನೆಡೆಯುಂಟಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜನತಾ ನ್ಯಾಯಾಲಯಕ್ಕೆ ತೆರಳುವೆ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವೆ. ನನ್ನ ಕೈ-ಕಾಲು ಇನ್ನೂ ಗಟ್ಟಿಯಾಗಿವೆ. ಇನ್ನೂ 10 ವರ್ಷಗಳ ಕಾಲ ರಾಜ್ಯಾದ್ಯಂತ ಸಂಚರಿಸಿ ಪಕ್ಷವನ್ನು ಮತ್ತಷ್ಟು ಸಂಘಟಿಸುತ್ತೇನೆ ಎಂದು ಯಡಿಯೂರಪ್ಪ ಘೋಷಿಸಿದರು.
ನನ್ನ ಜೀವನ ರೈತರಿಗೆ ಮುಡಿಪು: ನನ್ನ ಬದುಕಿನ ಕೊನೆಯ ಉಸಿರು ಇರುವವರೆಗೂ ನಾಡಿನ ರೈತರ ಬದುಕನ್ನು ಹಸನು ಮಾಡಲು ಮುಡಿಪಾಗಿಡುತ್ತೇನೆ ಎಂದು ಘೋಷಿಸಿದ ಯಡಿಯೂರಪ್ಪ, ರೈತ ಸಂಕಷ್ಟದಿಂದ ನರಳುತ್ತಿದ್ದು, ಅವರಿಗೆ ನ್ಯಾಯ ಒದಗಿಸುವ ಕಾರ್ಯ ಆಗಬೇಕು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ರಾಜ್ಯದಲ್ಲಿನ ರೈತ, ಕೃಷಿ ಕಾರ್ಮಿಕ ಎದುರಿಸುತ್ತಿರುವ ಸಮಸ್ಯೆಯ ಬಗ್ಗೆ ನಾವು ಗಂಭೀರವಾಗಿ ಚಿಂತನೆ ಮಾಡಬೇಕಿದೆ. 3,500ಕ್ಕೂ ಅಧಿಕ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ನೊಂದ ರೈತ ಸಮಾಜಕ್ಕೆ ನ್ಯಾಯ ಒದಗಿಸಿಕೊಡಬೇಕು. ಅದಕ್ಕಾಗಿ ನನ್ನ ಸರ್ವಸ್ವವನ್ನು ತ್ಯಾಗ ಮಾಡಿ, ರಾಜ್ಯಾದ್ಯಂತ ಪ್ರವಾಸ ಮಾಡುತ್ತೇನೆ ಎಂದು ಪ್ರಕಟಿಸಿದರು.
40ರಿಂದ 104ಕ್ಕೆ: ನಲವತ್ತು ವರ್ಷಗಳ ನನ್ನ ರಾಜಕೀಯ ಜೀವನದಲ್ಲಿ ಸಾಕಷ್ಟು ಅನುಭವ ಹೊಂದಿದ್ದೇನೆ. 40 ಶಾಸಕರಿದ್ದವರು ಇದೀಗ 104 ಸ್ಥಾನಕ್ಕೇರಿದ್ದೇವೆಂದ ಅವರು, ಅವರಪ್ಪನಾಣೆ ಸಿಎಂ ಆಗುವುದಿಲ್ಲ ಎನ್ನುವ ಮಾತುಗಳನ್ನು ಆಡಿದ ಕಾಂಗ್ರೆಸ್ ಸರಕಾರ ಜನರ ವಿಶ್ವಾಸ ಕಳೆದುಕೊಂಡಿದೆ. ಜನತೆ ತೀರ್ಪಿಗೆ ವಿರುದ್ಧವಾಗಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿವೆ ಎಂದು ಟೀಕಿಸಿದರು.
ಜನರ ವಿಶ್ವಾಸ ಗಳಿಸಿದ ರಾಜಕಾರಣಿ ನಾನು. ಒಬ್ಬನೆ ಶಾಸಕನಿದ್ದರೂ ದೃತಿಗೆಡದೇ ನಿಂತು ರೈತಪರ ಹೋರಾಡಿದ್ದೇನೆ. ಅದನ್ನು ಜೀವನದಲ್ಲಿ ಎಂದೂ ಮರೆಯುವುದಿಲ್ಲ ಎಂದ ಅವರು, ರೈತರ ವಿಚಾರದಲ್ಲಿ ನಾನು ಯಾವತ್ತೂ ಕೈಕಟ್ಟಿ ಕುಳಿತಿಲ್ಲ. ರಾಜ್ಯದ ಜನರ ಸೇವೆ ಮಾಡಬೇಕು. ರೈತರನ್ನು ಉಳಿಸಬೇಕು. ನನ್ನ ಜೀವನವನ್ನು ರೈತ ಸಮುದಾಯಕ್ಕೆ ಮೀಸಲಿಡುವೆ ಎಂದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 1ಲಕ್ಷ ರೂ.ವರೆಗಿನ ರೈತರ ಸಾಲಮನ್ನಾ, ಸಹಕಾರ ಸಂಘಗಳಲ್ಲಿನ ರೈತರು-ನೇಕಾರರ ಸಾಲಮನ್ನಾ, ನೀರಾವರಿಗೆ ಆದ್ಯತೆ, ಕೃಷಿ ಉತ್ಪನ್ನಗಳಿಗೆ ಅಗತ್ಯ ಬೆಂಬಲ ಬೆಲೆ ಒದಗಿಸಬೇಕು. ವೃದ್ಧಾಪ್ಯ, ವಿಕಲಚೇತನರ ವೇತನ ಹೆಚ್ಚಿಸಬೇಕು ಎಂದ ಅವರು, ನಮ್ಮನ್ನು ಕಿತ್ತು ತಿನ್ನುವ ಜ್ವಲಂತ ಸಮಸ್ಯೆ ನಿವಾರಿಸಬೇಕು ಎಂದರು.
ಮೋದಿ ಗುಣಗಾನ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿದ್ದರೂ ಪ್ರಧಾನಿ ಮೋದಿ ರೈಲ್ವೆ ಯೋಜನೆ, ಹೆದ್ದಾರಿ ಉನ್ನತೀಕರಣ, ಮೆಟ್ರೋ ಸೇರಿದಂತೆ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಅನುದಾನ ವಿತರಣೆಯಲ್ಲಿ ಯಾವುದೇ ತಾರತಮ್ಯ ತೋರಿಸಿಲ್ಲ. ಕೇಂದ್ರದಲ್ಲಿ ಮೋದಿ ಸರಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರ ಒಗ್ಗಟ್ಟಿನಿಂದ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಅಭಿವೃದ್ಧಿಪಡಿಸುವ ಕನಸು ಕಂಡಿದ್ದೆ. ನಾಡಿನಲ್ಲಿ ಸಾಕಷ್ಟು ಸಂಪನ್ಮೂಲ ಇದೆ. ಅದರ ಸದ್ಬಳಕೆ ಮಾಡಿಕೊಳ್ಳುವ ಆಶಯ ನಮ್ಮದಾಗಿತ್ತು ಎಂದು ಹೇಳಿದರು.
ಅಗ್ನಿ ಪರೀಕ್ಷೆ: ನನ್ನ ಜೀವನದ ಉದ್ದಕ್ಕೂ ಅಗ್ನಿ ಪರೀಕ್ಷೆಯನ್ನೇ ಎದುರಿಸಿದ್ದೇನೆ. ನಮಗೆ 113 ಸ್ಥಾನ ಸಿಕ್ಕಿದ್ದರೆ ರಾಜ್ಯದ ಅಭಿವೃದ್ಧಿಯ ಚಿತ್ರಣವೇ ಬದಲಾಗುತ್ತಿತ್ತು. ಆದರೆ, ಅಷ್ಟು ಬೆಂಬಲ ಸಿಕ್ಕಿಲ್ಲ. ಇದರಿಂದ ಸದನದಲ್ಲಿರುವ ಎಲ್ಲ ಸದಸ್ಯರನ್ನು ಮನವಿ ಮಾಡುತ್ತೇನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ಮಾತನಾಡುತ್ತೇನೆ ಎಂದರು.
ಉಪ ಚುನಾವಣೆ ಸುಳಿವು: ತಾನಿನ್ನು ಗಟ್ಟಿಯಾಗಿದ್ದು, ನನ್ನ ಜೀವನದ ಕೊನೆಯ ಉಸಿರು ಇರುವವರೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿವೆ. ಅಲ್ಲದೆ, ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿನ 28 ಸ್ಥಾನಗಳ ಪೈಕಿ 28 ಸ್ಥಾನಗಳನ್ನು ಗೆಲ್ಲಿಸಿ ಮೋದಿ ಕೈಬಲಪಡಿಸುವೆ. ಮುಂದೆ ಚುನಾವಣೆ ಎದುರಿಸುವ ಸಂದರ್ಭ ಬಂದರೆ, ಉಪ ಚುನಾವಣೆ ಬಂದರೆ 150 ಸ್ಥಾನ ಗೆದ್ದು ರಾಜ್ಯವನ್ನು ಅಭಿವೃದ್ಧಿಯಲ್ಲಿ ಮೊದಲ ಸ್ಥಾನಕ್ಕೆ ತರುತ್ತೇನೆ. ಆ ವಿಶ್ವಾಸದೊಂದಿಗೆ ನಾನು ಹೊರಡುತ್ತಿದ್ದೇನೆ ಎಂದು ಘೋಷಿಸಿದರು.
ನನಗೆ ಇಷ್ಟು ಅವಕಾಶ ಕೊಟ್ಟ ರಾಜ್ಯದ ಜನತೆಗೆ ವಂದಿಸುತ್ತೇನೆ. ರಾಜ್ಯದ ಜನಾದೇಶಕ್ಕೆ ತಲೆಬಾಗುವೆ. ಶಾಸಕರಿಗೆ ಆತ್ಮಸಾಕ್ಷಿಯಿಂದ ಮತ ಹಾಕಬೇಕೆಂದು ಕೋರಿದ್ದು ನಿಜ. ಈ ಸಂಬಂಧ ಕೆಲವರನ್ನು ಸಂಪರ್ಕಿಸಿ ಬೆಂಬಲ ಕೋರಿದ್ದು ಸತ್ಯ. ಆದರೆ, ಕೆಲವರು ಭಯ-ಭೀತರಾಗಿ ತಮ್ಮ ಶಾಸಕರನ್ನು ಕೂಡಿ ಹಾಕಿದ್ದರು. ಅಲ್ಲದೆ, ತಮ್ಮ ಕುಟುಂಬದ ಸದಸ್ಯರೊಂದಿಗೆ ಮಾತನಾಡಲು ಅವಕಾಶ ನೀಡಿಲ್ಲ. ಒತ್ತಡ ಹೇರಿದ್ದಾರೆ. ಇಂದು ಅವರ ಕುಟುಂಬ ಸದಸ್ಯರಿಗೆ ನೆಮ್ಮದಿ ಸಿಕ್ಕಿದೆ ಎಂದು ಹೇಳಿದರು.
‘ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ನನ್ನ ಹೋರಾಟ ನಿಲ್ಲದು. ಅಧಿಕಾರ ಸಿಗಲಿ ಸಿಗದಿರಲಿ ಜನರಿಗಾಗಿ ಪ್ರಾಣ ಕೊಡುತ್ತೇನೆ. ಆದರೆ, ಗೆಲ್ಲಿಸದಿದ್ದರೆ ಪ್ರಾಣ ಕಳೆದುಕೊಳ್ಳುವೆ ಎಂದು ಕೆಲವರು ಹೇಳಿದ್ದರು. ಆದರೆ, ನಾನು ಜನರಿಗಾಗಿ ಪ್ರಾಣ ಕೊಡುತ್ತೇನೆ’
-ಯಡಿಯೂರಪ್ಪ, ಮುಖ್ಯಮಂತ್ರಿ







