ಸರ್ವರೋಗಗಳ ಹೆಬ್ಬಾಗಿಲು ಆಗಿರುವ ಅಧಿಕ ರಕ್ತದೊತ್ತಡದಿಂದ ದೂರವಿರುವುದು ಹೇಗೆ....?
ಹೈಪರ್‌ಟೆನ್ಶನ್ ಅಥವಾ ಅಧಿಕ ರಕ್ತದೊತ್ತಡವು ಪ್ರಮುಖ ವೈದ್ಯಕೀಯ ಮತ್ತು ಸಾಮಾಜಿಕ ಆರೋಗ್ಯ ಸಮಸ್ಯೆಯಾಗಿದೆ. ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಗುರಿಯಾಗುವುದು ಅನಿವಾರ್ಯವಾಗುತ್ತಿದೆ. 60ರಿಂದ 69 ವರ್ಷ ವಯೋಮಾನದ ಶೇ.50ರಷ್ಟು ಮತ್ತು 70ಕ್ಕಿಂತ ಹೆಚ್ಚಿನ ಪ್ರಾಯದವರಲ್ಲಿ ಶೇ.75ರಷ್ಟು ಜನರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಅಧಿಕ ರಕ್ತದೊತ್ತಡವು ಸರ್ವ ರೋಗಗಳಿಗೆ ಹೆಬ್ಬಾಗಿಲು ಆಗಿದೆ. ಹೃದಯದ ಪರಿಧಮನಿಗಳನ್ನು ಪೆಡಸಾಗಿದುವ ಅದು ಅವುಗಳನ್ನು ಸಂಕುಚಿತಗೊಳಿಸುತ್ತದೆ ಮತ್ತು ಇದರಿಂದಾಗಿ ಹೃದಯಕ್ಕೆ ರಕ್ತಪೂರೈಕೆಯಲ್ಲಿ ಕೊರತೆಯುಂಟಾಗುತ್ತದೆ.
ಅಧಿಕ ರಕ್ತದೊತ್ತಡವು ಹೃದಯಾಘಾತಕ್ಕೂ ಕಾರಣವಾಗುತ್ತದೆ. ತೀವ್ರ ಹೃದಯಾಘಾತಕ್ಕೆ ಗುರಿಯಾಗುವ ಹೆಚ್ಚಿನ ಜನರು ಮೊದಲಿನಿಂದಲೂ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುತ್ತಾರೆ. ಕೆಲವೊಮ್ಮೆ ರಕ್ತದೊತ್ತಡ ಇರುವುದು ಗೊತ್ತೇ ಆಗುವುದಿಲ್ಲ,ಹೀಗಾಗಿ ಸೂಕ್ತಚಿಕಿತ್ಸೆಯಿಂದ ಅವರು ವಂಚಿತರಾಗುತ್ತಾರೆ. ರಕ್ತದೊತ್ತಡವು ಹೃದಯದ ಮಾಂಸಖಂಡಗಳನ್ನು ಅಸಾಧಾರಣವಾಗಿ ದಪ್ಪವಾಗಿಸುತ್ತದೆ ಮತ್ತು ಇದು ಹೃದಯಾಘಾತದ ಹೆಚ್ಚಿನ ಅಪಾಯವನ್ನುಂಟು ಮಾಡುತ್ತದೆ.
ಅಧಿಕ ರಕ್ತದೊತ್ತಡವು ರಕ್ತವನ್ನು ಪಂಪ್ ಮಾಡುವ ಹೃದಯದ ಸಾಮರ್ಥ್ಯವನ್ನು ಕುಂದಿಸುತ್ತದೆ ಮತ್ತು ಈ ಕಾರ್ಯವನ್ನು ನಿರ್ವಹಿಸಲು ಅದು ಹೆಚ್ಚು ಶ್ರಮಿಸಬೇಕಾಗುತ್ತದೆ.
ಅಧಿಕ ರಕ್ತದೊತ್ತಡವನ್ನು ನಿಭಾಯಿಸಲು ಹಾಗೂ ಹೃದಯಾಘಾತ, ಹೃದ್ರೋಗಗಳು,ಪಾರ್ಶ್ವವಾಯು ಮತ್ತು ಇತರ ಕಾಯಿಲೆಗಳ ಅಪಾಯವನ್ನು ತಗ್ಗಿಸಲು ಹೃದಯಕ್ಕೆ ಆರೋಗ್ಯಕರವಾದ ಆಹಾರ ಸೇವನೆಯು ಅಗತ್ಯವಾಗಿದೆ. ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ಹಣ್ಣುಗಳು,ತರಕಾರಿಗಳು,ಇಡಿಯ ಧಾನ್ಯಗಳು ಮತ್ತು ನಾರಿನಂಶ ಸಮೃದ್ಧವಾಗಿರುವಂತೆ ನೋಡಿಕೊಳ್ಳಬೇಕು. ಆಹಾರದಲ್ಲಿ ಹೆಚ್ಚಿನ ಕೊಬ್ಬು ಇರಬಾರದು. ಅಧಿಕ ಉಪ್ಪು ಮತ್ತು ಸಕ್ಕರೆಯೂ ಒಳ್ಳೆಯದಲ್ಲ.
ನಮ್ಮ ಶರೀರದ ತೂಕ ಅಗತ್ಯಕ್ಕಿಂತ ಹೆಚ್ಚಿದ್ದರೆ ಅಧಿಕ ರಕ್ತದೊತ್ತಡದ ಸಮಸ್ಯೆಗೆ ಗುರಿಯಾಗುವ ಅಪಾಯ ಹೆಚ್ಚಾಗಿರುತ್ತದೆ. ಹೀಗಾಗಿ ತೂಕವನ್ನು ಕಡಿಮೆ ಮಾಡಿಕೊಂಡರೆ ಅಧಿಕ ರಕ್ತದೊತ್ತಡದ ಅಪಾಯವೂ ಕಡಿಮೆಯಾಗುತ್ತದೆ. ಸಣ್ಣ ಪ್ರಮಾಣದಲ್ಲಿ ತೂಕ ಇಳಿಕೆಯೂ ಅಧಿಕ ರಕ್ತದೊತ್ತಡವನ್ನು ತಡೆಯುವಲ್ಲಿ ಮತ್ತು ಅದರ ಚಿಕಿತ್ಸೆಯಲ್ಲಿ ಹೆಚ್ಚಿನ ನೆರವನ್ನು ನೀಡುತ್ತದೆ.
ದೈಹಿಕ ಚಟುವಟಿಕೆ ಅತ್ಯಂತ ಮುಖ್ಯವಾಗಿದೆ. ಅದು ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಶರೀರದ ತೂಕವನ್ನು ಒಂದು ಮಿತಿಯಲ್ಲಿರಿಸಲು ನೆರವಾಗುತ್ತದೆ. ವಾರಕ್ಕೆ ಕನಿಷ್ಠ ಐದು ದಿನ ಪ್ರತಿದಿನ 30 ನಿಮಿಷಗಳ ಬಿರುಸಾದ ನಡಿಗೆ ಉತ್ತಮ ಆರೋಗ್ಯಲಾಭಗಳನ್ನು ನೀಡುತ್ತದೆ. ಮೆಟ್ಟಿಲುಗಳನ್ನು ಹತ್ತುವುದು, ಜಾಗಿಂಗ್, ಓಟ, ಸೈಕ್ಲಿಂಗ್, ಈಜು, ಫಿಟ್‌ನೆಸ್ ಮತ್ತು ಡ್ಯಾನ್ಸ್ ಕ್ಲಾಸ್ ಇವೆಲ್ಲ ನಮ್ಮ ಶರೀರವನ್ನು ಆರೋಗ್ಯಯುತವಾಗಿರಿಸುವ ಕೆಲವು ದೈಹಿಕ ಚಟುವಟಿಕೆಗಳಾಗಿವೆ.
ಅತಿಯಾದ ಮದ್ಯಪಾನವು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಒಂದು ಬಾರಿಗೆ ಮೂರು ಪೆಗ್‌ಗಳಿಗಿಂತ ಹೆಚ್ಚಿನ ಮದ್ಯಸೇವನೆಯು ರಕ್ತದೊತ್ತಡವನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತದೆ,ಆದರೆ ಮದ್ಯಸೇವನೆ ಮಿತಿಮೀರಿದರೆ ಅದು ದೀರ್ಘಕಾಲೀನ ಕಾಯಿಲೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡದಿಂದ ಬಳುತ್ತಿರುವವರು ಮದ್ಯಪಾನದಿಂದ ದೂರವಿರಬೇಕು. ಸೇವಿಸಲೇಬೇಕು ಎಂದಿದ್ದರೆ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಧೂಮ್ರಪಾನವು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲವಾದರೂ,ಪ್ರತಿ ಸಿಗರೇಟ್ ಸೇವನೆಯ ಬಳಿಕ ಹಲವಾರು ನಿಮಿಷಗಳವರೆಗೆ ರಕ್ತದೊತ್ತಡವು ಹೆಚ್ಚಾಗಿರುತ್ತದೆ. ಶರೀರದ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಹೃದಯಾಘಾತ, ಪಾರ್ಶ್ವವಾಯು ಇತ್ಯಾದಿ ಅಪಾಯಗಳನ್ನು ತಗ್ಗಿಸಲು ತಂಬಾಕಿನ ಎಲ್ಲ ರೂಪಗಳಿಂದ ದೂರವಿರುವುದು ಒಳ್ಳೆಯದು. ಅಲ್ಲದೆ ಇತರರು ಧೂಮ್ರಪಾನ ಮಾಡಿದಾಗ ಅದರ ಹೊಗೆಯನ್ನು ಸೇವಿಸುವುದರಿಂದ ಪಾರಾಗಲು ಅಲ್ಲಿಂದ ಜಾಗ ಖಾಲಿ ಮಾಡುವುದೂ ಒಳ್ಳೆಯದು.