ರಾಷ್ಟ್ರಗೀತೆ ಹಾಡುತ್ತಿದ್ದಂತೆ ಕರ್ನಾಟಕ ವಿಧಾನಸಭೆಯಿಂದ ಹೊರನಡೆದ ಬಿಜೆಪಿ ಶಾಸಕರು: ರಾಹುಲ್ ಗಾಂಧಿ ಆಕ್ರೋಶ
"ಮೋದಿಯ ಆಡಳಿತ ಸರ್ವಾಧಿಕಾರಿಯ ರೀತಿಯಲ್ಲಿದೆ"

ಹೊಸದಿಲ್ಲಿ, ಮೇ 19: ಕರ್ನಾಟಕದಲ್ಲಿ ಯಡಿಯೂರಪ್ಪ ರಾಜೀನಾಮೆ ಘೋಷಿಸುತ್ತಿದ್ದಂತೆ ಬಿಜೆಪಿ ಶಾಸಕರು ಹಾಗು ಸ್ಪೀಕರ್ ರಾಷ್ಟ್ರಗೀತೆ ಹಾಡುತ್ತಿದ್ದಂತೆ ವಿಧಾನಸಭೆಯಿಂದ ಹೊರನಡೆದರು. ಇದುವೇ ಇಂದಿನ ಆತಂಕವಾಗಿದೆ. ಸಾಂವಿಧಾನಿಕ ಸಂಸ್ಥೆಗಳನ್ನು ಅವರು ಗೌರವಿಸುವುದಿಲ್ಲ ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕದ ಜನತೆಗೆ, ದೇವೇಗೌಡರಿಗೆ ಹಾಗು ಅವರ ಪಕ್ಷಕ್ಕೆ ನನ್ನ ಶುಭಾಶಯಗಳು ಎಂದರು. ಸಾಂವಿಧಾನಿಕ ಸಂಸ್ಥೆಗಳನ್ನು ಬಿಜೆಪಿಗರು ಗೌರವಿಸುವುದಿಲ್ಲ. ರಾಷ್ಟ್ರಗೀತೆಯ ನಡುವೆಯೇ ಬಿಜೆಪಿ ಶಾಸಕರು ವಿಧಾನಸಭೆಯಿಂದ ಹೊರನಡೆದಿದ್ದು ಇದರಿಂದ ಸ್ಪಷ್ಟವಾಗುತ್ತದೆ. ಕಾಂಗ್ರೆಸ್ ಶಾಸಕರನ್ನು ಖರೀದಿಸಲು ಬಿಜೆಪಿಗರು ಯತ್ನಿಸಿದ್ದರು. ಇದರ ಆಡಿಯೋ ರೆಕಾರ್ಡ್ ನಮ್ಮ ಬಳಿಯಿದೆ. ಮೋದಿಯವರು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಆದರೆ ಭ್ರಷ್ಟಾಚಾರ ಅವರ ಪಕ್ಷದಲ್ಲೇ ತಾಂಡವವಾಡುತ್ತಿದೆ. ಸುಪ್ರಿಂ ಕೋರ್ಟ್, ಭಾರತ, ಭಾರತದ ಜನರಿಗಿಂತ ಪ್ರಧಾನಿ ದೊಡ್ಡವರಲ್ಲ ಎಂದು ನಾನು ಈ ಮೂಲಕ ತಿಳಿಸಲು ಬಯಸುತ್ತೇನೆ. ಮೋದಿಯ ಆಡಳಿತ ಸರ್ವಾಧಿಕಾರಿಯ ರೀತಿಯಲ್ಲಿದೆ, ಹೊರತು ಪ್ರಜಾಪ್ರಭುತ್ವ ಮಾದರಿಯಲ್ಲಿಲ್ಲ ಎಂದು ರಾಹುಲ್ ಆಕ್ರೋಶ ವ್ಯಕ್ತಪಡಿಸಿದರು.





