ಉರುಳಿ ಬಿದ್ದ ಸಿಮೆಂಟ್ ಟ್ರಕ್: 19 ಮಂದಿ ಬಲಿ
ಹಲವರಿಗೆ ಗಾಯ

ಅಹ್ಮದಾಬಾದ್, ಮೇ 19: ಗುಜರಾತ್ ರಾಜ್ಯದ ಬಾವಲ್ಯಲಿ ಗ್ರಾಮದ ಮೂಲಕ ಹಾದು ಹೋಗುವ ಅಹ್ಮದಾಬಾದ್-ಭಾವ್ನಗರ್ ಹೆದ್ದಾರಿಯಲ್ಲಿ ಟ್ರಕ್ ಒಂದು ಉರುಳಿ ಬಿದ್ದ ಪರಿಣಾಮ 19 ಜನರು ಸಾವಿಗೀಡಾಗಿ ಇತರ ಏಳು ಮಂದಿ ಗಾಯಗೊಂಡ ಘಟನೆ ಶನಿವಾರ ವರದಿಯಾಗಿದೆ. ಮೃತಪಟ್ಟ ಹೆಚ್ಚಿನವರು ಕಾರ್ಮಿಕರಾಗಿದ್ದರು.
ಸಿಮೆಂಟು ಚೀಲಗಳನ್ನು ಸಾಗಿಸುತ್ತಿದ್ದ ಟ್ರಕ್ ಬೆಳಗ್ಗಿನ ಜಾವ ಸುಮಾರು 2:30ಕ್ಕೆ ಅಪಘಾತಕ್ಕಿಡಾಗಿದೆ. ಘಟನೆ ನಡೆದ ಕೂಡಲೇ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಟ್ರಕ್ ಭಾರೀ ವೇಗದಿಂದ ಚಲಿಸುತ್ತಿದ್ದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಮೃತಪಟ್ಟವರಲ್ಲಿ 12 ಮಂದಿ ಮಹಿಳೆಯರು ಹಾಗೂ ಮೂವರು ಮಕ್ಕಳು ಸೇರಿದ್ದಾರೆ. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ಧಾರೆ.
ಗಾಯಾಳುಗಳನ್ನು ಭಾವ್ನಗರ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾವ್ನಗರ್ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ನಡೆದ ಅಪಘಾತದಲ್ಲಿ ಮದುವೆಗೆ ಹೋಗುತ್ತಿದ್ದ ಜನರನ್ನು ಸಾಗಿಸುತ್ತಿದ್ದ ಟ್ರಕ್ ಅಪಘಾತಕ್ಕಿಡಾಗಿ 30 ಮಂದಿ ಪ್ರಾಣ ಕಳೆದುಕೊಂಡಿದ್ದರು.
Next Story





