ಪುತ್ತೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಸಂಭ್ರಮಾಚರಣೆ

ಪುತ್ತೂರು, ಮೇ 19: ವಿಧಾನಸಭೆಯಲ್ಲಿ ಶನಿವಾರ ಸಂಜೆ ನಡೆಯಬೇಕಿದ್ದ ಬಿಜೆಪಿ ವಿಶ್ವಾಸ ಮತಯಾಚನೆಯ ವೇಳೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ವಿಶ್ವಾಸ ಮತಯಾಚನೆಗೆ ಮುಂದಾಗದೆ ರಾಜೀನಾಮೆ ನೀಡಿ ಸೋಲೊಪ್ಪಿಕೊಂಡ ಹಿನ್ನೆಲೆಯಲ್ಲಿ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರು ಜಂಟಿಯಾಗಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ ಅವರು ಇಂದು ನಮ್ಮ ಪಾಲಿಗೆ ಸುದಿನವಾಗಿದೆ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ರಾಜ್ಯಪಾಲರು ಕೈಗೊಂಡಿದ್ದ ನಿರ್ಧಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನ್ಯಾಯವನ್ನು ಎತ್ತಿ ಹಿಡಿಯುವ ಮೂಲಕ ದೇಶದಲ್ಲಿ ನ್ಯಾಯವಿದೆ ಎಂಬ ಸಂದೇಶವನ್ನು ಸಾರಿದೆ. ಇದು ನ್ಯಾಯಕ್ಕೆ ಸಿಕ್ಕಿದ ಜಯ. ಸುಪ್ರೀಂ ಕೋರ್ಟಿನ ಆದೇಶದ ವಿಜಯ, ಸಂವಿಧಾನದ ವಿಜಯೋತ್ಸವ ಆಗಿದೆ ಎಂದರು.
ಬಿಹಾರ ,ಗೋವಾ , ಮೇಘಾಲಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತವಿದ್ದರೂ ಸರ್ಕಾರ ರಚಿಸಲು ಅವಕಾಶ ಮಾಡಿ ಕೊಡದ ಬಿಜೆಪಿ ಸರ್ಕಾರ ಕರ್ನಾಟಕದಲ್ಲಿ ಯಾವ ರೀತಿಯಲ್ಲಾದರೂ ಅಧಿಕಾರ ಪಡೆಯುವ ಕನಸು ಕಂಡಿತ್ತು. ನೂರು,ಇನ್ನೂರು ಕೋಟಿ ಹಣದ ಆಮಿಷ ಒಡ್ಡಿತ್ತು. ಆದರೆ ಕಾಂಗ್ರೆಸ್, ಜೆಡಿಎಸ್ ಮತ್ತು ಇಬ್ಬರು ಪಕ್ಷೇತರ ಸದಸ್ಯರು ಆಮಿಷಕ್ಕೆ ಒಳಗಾಗಲಿಲ್ಲ. ಅವರನ್ನು ನಾವು ಅಭಿನಂದಿಸಬೇಕಾಗಿದೆ ಎಂದ ಅವರು ರಾಜ್ಯದಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಪಡೆದಿದ್ದರೂ ಮತಗಳಿಕೆಯಲ್ಲಿ ಕಾಂಗ್ರೆಸ್ ಮುಂದಿದ್ದು, ಅತ್ಯಧಿಕ ಮತಗಳನ್ನು ಪಡೆದುಕೊಂಡಿದೆ ಎಂದರು.
ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಅಶ್ರಫ್ ಕಲ್ಲೇಗ ಅವರು ಮಾತನಾಡಿ ಪ್ರಜಾಪ್ರಭುತ್ವ ದೇಶದಲ್ಲಿದೆ ಎನ್ನುವುದಕ್ಕೆ ಸುಪ್ರೀಂ ಕೋರ್ಟಿನ ಈ ಆದೇಶವೇ ಸಾಕ್ಷಿ. ಸುಪ್ರೀಂ ಕೋರ್ಟು ಬಿಜೆಪಿಗೆ ಕುದುರೆ ವ್ಯಾಪಾರ ನಡೆಸಲು ಅವಕಾಶ ಮಾಡಿಕೊಡದೆ ನಮಗೆ ನ್ಯಾಯ ನೀಡಿದೆ ಎಂದರು.
ರಾಜ್ಯದಲ್ಲಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತಕ್ಕೆ ಬರಲಿದ್ದು, 5 ವರ್ಷಗಳ ಕಾಲ ಆಡಳಿತ ನಡೆಸಲಿದೆ. ರೈತರ ಸಾಲ ಮನ್ನಾ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಉತ್ತಮ ಆಡಳಿತ ನೀಡಲಿದೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡರಾದ ಮಾರಪ್ಪ ಶೆಟ್ಟಿ, ಬಾಲಕೃಷ್ಣ ರೈ ನೆಲ್ಲಿಕಟ್ಟೆ, ಸೂಫಿ ಬಪ್ಪಳಿಗೆ, ಮೂಸಕುಂಞಿ ಬಪ್ಪಳಿಗೆ,ದೀಪಕ್ ನೆಲ್ಲಿಕಟ್ಟೆ ,ಸುರೇಶ್ ನಾಯ್ಕೆ, ಜೆಡಿಎಸ್ ಮುಖಂಡ ಗೋಳಿಕಟ್ಟೆ ಇಬ್ರಾಹಿಂ , ಅದ್ದು ಪಡೀಲು, ಕರೀಂ ಪಳ್ಳತ್ತೂರು, ಇಬ್ರಾಹಿಂ ಪರ್ಪುಂಜ , ನಝೀರ್ ಬಲ್ನಾಡು ಮತ್ತಿತರರು ಉಪಸ್ಥಿತರಿದ್ದರು.







