ಮೇ 20: ನಿರ್ವಸಿತ ಕೊರಗ ಕುಟುಂಬಗಳಿಗೆ ಮನೆ ಹಸ್ತಾಂತರ
ಮಂಗಳೂರು, ಮೇ 19: ನಂತೂರಿನ ಹೈಪಾಯಿಂಟ್‌ನಲ್ಲಿ 2009ರಲ್ಲಿ ಹೆದ್ದಾರಿ ನಿರ್ಮಾಣಕ್ಕಾಗಿ ಮನೆ ಮತ್ತು ಭೂಮಿಯನ್ನು ಕಳೆದುಕೊಂಡ ಎಂಟು ಆದಿವಾಸಿ ಕೊರಗ ಸಮುದಾಯದ ಕುಟುಂಬಗಳಿಗೆ ಮಂಗಳೂರು ಕುಲಶೇಖರದ ಕೋಟಿಮುರದಲ್ಲಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ನಾಯಕತ್ವದಲ್ಲಿ ನಿರ್ಮಿಸಿಕೊಂಡಿರುವ ಎಂಟು ಮನೆಗಳ ಹಸ್ತಾಂತರ ಕಾರ್ಯಕ್ರಮವು ಮೇ 20ರಂದು ಬೆಳಗ್ಗೆ 11ಗಂಟೆಗೆ ಕುಲಶೇಖರ ಕೋಟಿಮುರದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ನವದೆಹಲಿಯ ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‌ನ ಅಖಿಲ ಭಾರತ ಸಂಚಾಲಕ ಹಾಗೂ ಸಂಸತ್ ಸದಸ್ಯರೂ ಆಗಿರುವ ಜಿತೇಂದ್ರ ಚೌಧರಿ ಅವರು ನೆರವೇರಿಸಲಿದ್ದಾರೆ.
ದ.ಕ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರು ಫಲಾನುಭವಿಗಳಿಗೆ ಕೀಲಿ ಕೈ ಹಸ್ತಾಂತರ ಮಾಡಲಿದ್ದಾರೆ.ಮುಖ್ಯಅತಿಥಿಗಳಾಗಿ ಮೇಯರ್ ಕೆ. ಭಾಸ್ಕರ್ ಮೊಯ್ಲಿ, ಸಿಪಿಎಂ ದ.ಕ. ಜಿಲ್ಲಾ ಕಾರ್ಯದರ್ಶಿ ವಸಂತ್ ಆಚಾರಿ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ರೋಯ್ ಕ್ಯಾಸ್ಟಲಿನೊ, ದಲಿತ ಚಿಂತಕರಾದ ಸೀತಾರಾಮ್ ಎಸ್., ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಮುಖಂಡರಾದ ಎಸ್. ವೈ. ಗುರುಶಾಂತ್ ಅವರು ಭಾಗವಹಿಸಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಮನೆನಿರ್ಮಾಣ ಸಮಿತಿಯ ಅಧ್ಯಕ್ಷರೂ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹಸಂಚಾಲಕರೂ ಆದ ಡಾ. ಕೃಷ್ಣಪ್ಪ ಕೊಂಚಾಡಿಯವರು ವಹಿಸಲಿದ್ದಾರೆ. ಆಕರ್ಷಕ ಮತ್ತು ಆಧುನಿಕ ಅವಶ್ಯಕತೆಗಳೊಂದಿಗೆ ಸರಕಾರದ ವಿವಿಧ ಇಲಾಖೆಗಳಿಂದ ಪ್ರತೀ ಮನೆಗೆ 3 ಲಕ್ಷ ರೂ. ಸಹಾಯಧನ ದೊರೆತಿದ್ದು ಅದರಂತೆ ಮನೆಗೆ ಸುಮಾರು ಮೂರುವರೆ ಲಕ್ಷ ರೂ.ವನ್ನು ದಾನಿಗಳು ಮತ್ತು ಫಲಾನುಭವಿಗಳ ಜಂಟಿ ಸಹಕಾರದೊಂದಿಗೆ ಆದಿವಾಸಿ ಮನೆ ನಿರ್ಮಾಣ ಸಮಿತಿಯು ನಿರ್ಮಿಸಿದೆ. ಸರಕಾರದ ಯೋಜನೆಯನ್ನು ಯೋಜನಾಬದ್ಧವಾಗಿ ಉಪಯೋಗಿಸಿಕೊಂಡಿರುವ ಈ ಯೋಜನೆಯು ಕರ್ನಾಟಕದಲ್ಲೇ ವಿಶಿಷ್ಟ ಯೋಜನೆಯಾಗಿದೆ ಎಂದು ಮಂಗಳೂರು ಘಟಕದ ಸಂಚಾಲಕ ಜಯಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.







