ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯ: ಸಿಪಿಐ
ಮಂಗಳೂರು, ಮೇ 19: ವಿಶ್ವಾಸ ಮತ ಸಾಬೀತು ಪಡಿಸಲು ಸಾಧ್ಯವಾಗದ ಯಡಿಯೂರಪ್ಪನವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟಿರುವುದು ಪ್ರಜಾಪ್ರಭುತ್ವಕ್ಕೆ ಸಿಕ್ಕಿದ ಗೆಲುವಾಗಿದೆ. ರಾಜ್ಯಪಾಲರು ಕುಮಾರಸ್ವಾಮಿಯವರನ್ನು ಕೂಡಲೇ ಕರೆದು ಕಾಂಗ್ರೆಸ್ ಮತ್ತು ಜೆಡಿಯಸ್ ಸಮ್ಮಿಶ್ರ ಸರಕಾರ ರಚಿಸಲು ಅನುವು ಮಾಡಿ ಕೊಡಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷದ (ಸಿಪಿಐ) ದ ಕ. ಮತ್ತು ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸಿದೆ.
ಕರ್ನಾಟಕ ವಿಧಾನ ಸಭೆಗೆ ಚುನಾವಣೆ ನಡೆದು ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಒಂದಾಗಿ ತಾವು ಜೊತೆಯಾಗಿ ಸರಕಾರ ರಚಿಸಲು ತಯಾರಿರುವೆವು ಎಂದು ರಾಜ್ಯಪಾಲರನ್ನು ಭೇಟಿಯಾಗಿ ಮನವಿ ಮಾಡಿಕೊಂಡರೂ ಅದನ್ನು ಲೆಕ್ಕಿಸದೆ ರಾಜ್ಯಪಾಲರು 104 ಶಾಸಕರಿರುವ ಬಿಜೆಪಿಗೆ ಸರಕಾರ ರಚಿಸಲು ಅನುವು ಮಾಡಿ ಕೊಟ್ಟು ಬಹುಮತ ಸಾಧಿಸಲು 15 ದಿನಗಳ ಗಡುವು ಕೊಟ್ಟಿರುವುದು ಪ್ರಜಾಪ್ರಭುತ್ವದ ಕೊಲೆ ಎಂದರೆ ತಪ್ಪಾಗಲಾರದು. ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್ 2018ರ ಮೇ 19ರಂದು ಸಂಜೆ 4 ಗಂಟೆಗೆ ಬಹುಮತ ಸಾಬೀತು ಪಡಿಸಲು ಗಡುವು ಕೊಟ್ಟಿದ್ದಾರೆ. ಅದರ ಈ ತೀರ್ಪನ್ನು ನಾವು ಸ್ವಾಗತಿಸುತ್ತೇವೆ ಎಂದು ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.





