ಜಯನಗರ-ರಾಜರಾಜೇಶ್ವರಿನಗರ ಚುನಾವಣೆ: ಬಿಜೆಪಿ ಉಸ್ತುವಾರಿಗಳ ನೇಮಕ

ಬೆಂಗಳೂರು, ಮೇ 20: ಜಯನಗರ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳ ಚುನಾವಣೆ ಹಿನ್ನೆಲೆಯಲ್ಲಿ ಎರಡು ಕ್ಷೇತ್ರಗಳಿಗೂ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನಾಗಿ ಅನಂತಕುಮಾರ್ ಹಾಗೂ ಡಿ.ವಿ.ಸದಾನಂದಗೌಡ ಅವರನ್ನು ನೇಮಿಸಿದೆ.
ರವಿವಾರ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿಗೆ ಮುಂದಾಗಿದ್ದು, ಸರಕಾರ ರಚನೆಗೆ ಮೊದಲೇ ಆ ಪಕ್ಷಗಳ ನಾಯಕರ ಮಧ್ಯೆ ಜಗಳ ಆರಂಭವಾಗಿದೆ. ಈ ಮೈತ್ರಿ ನಾಟಕವನ್ನು ಮುಂದಿನ ದಿನದಲ್ಲಿ ರಾಜ್ಯದ ಜನತೆಗೆ ಮನರಂಜನೆ ಸಿಗಲಿದೆ ಎಂದರು.
ಜಯನಗರ ಮತ್ತು ರಾಜರಾಜೇಶ್ವರಿ ನಗರ ಕ್ಷೇತ್ರಗಳ ಚುನಾವಣೆಗೆ ಬಿಜೆಪಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆಗೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದ ಅವರು, ಜಯನಗರದಲ್ಲಿ ಬಿಜೆಪಿ ಅಭ್ಯರ್ಥಿ ಆಯ್ಕೆ ವಿಚಾರ ಕುರಿತು ವಿಜಯಕುಮಾರ್ ಅವರ ಕುಟುಂಬಕ್ಕೆ ಟಿಕೆಟ್ ಬೇಕೋ ಅಥವಾ ಕಾರ್ಯಕರ್ತರಿಗೆ ಕೊಡಬೇಕೋ ಎಂದು ಚರ್ಚೆ ನಡೆಯುತ್ತಿದೆ ಎಂದರು.
ರಾಜ್ಯದಲ್ಲಿ ರಾಷ್ಟ್ರಪತಿಗಳ ಆಡಳಿತಕ್ಕೆ ಬಿಜೆಪಿ ಪ್ರಯತ್ನಿಸುತ್ತಿದೆ ಎಂಬುದು ಕೇವಲ ವದಂತಿಯಷ್ಟೇ. ದೇಶದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯುವಲ್ಲಿ ಮುಂದೆ ನಿಲ್ಲುವುದೇ ಬಿಜೆಪಿ. ಆತಂಹ ಯಾವುದೇ ಪ್ರಯತ್ನಕ್ಕೆ ಬಿಜೆಪಿ ಕೈಹಾಕುವುದಿಲ್ಲ ಎಂದು ಹೇಳಿದರು.







