ವರ್ಣಚಿತ್ರ ಕಳವು ಪ್ರಕರಣ: ಆರೋಪಿಗೆ ನಿವೃತ್ತಿ ಲಾಭಾಂಶ ನೀಡುವಂತೆ ಏರ್ ಇಂಡಿಯಗೆ ನ್ಯಾಯಾಲಯ ಸೂಚನೆ

ಹೊಸದಿಲ್ಲಿ, ಮೇ 20: ಪ್ರಸಿದ್ಧ ವರ್ಣಚಿತ್ರಕಾರ ಜತಿನ್‌ದಾಸ್ ಅವರ ಚಿತ್ರಕಲೆಯನ್ನು ಕಳವು ಮಾಡಿದ ಆರೋಪ ಎದುರಿಸುತ್ತಿರುವ ಏರ ಇಂಡಿಯ ಸಂಸ್ಥೆಯ ಮಾಜಿ ಮಹಿಳಾ ಕಾರ್ಯನಿರ್ವಾಹಕ ನಿರ್ದೇಶಕಿಯ ನಿವೃತ್ತಿ ನಂತರದ ಲಾಭಾಂಶಗಳನ್ನು ಆಕೆಗೆ ನೀಡುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಏರ್ ಇಂಡಿಯಗೆ ಸೂಚಿಸಿದೆ.
ಏರ್ ಇಂಡಿಯ ಸಂಗ್ರಹದಲ್ಲಿದ್ದ ಜತಿನ್ ದಾಸ್ ಅವರು ರಚಿಸಿದ್ದ ತೈಲವರ್ಣಚಿತ್ರ ಪ್ಲೈಯಿಂಗ್ ಅಪ್ಸರಾವನ್ನು ಏರ್ ಇಂಡಿಯ ಕಾರ್ಯನಿರ್ವಾಹಕ ನಿರ್ದೇಶಕಿಯಾಗಿದ್ದ ರೋಹಿತಾ ಜೈಡ್ಕ ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣದಿಂದ ಸಂಸ್ಥೆಯು ಆಕೆಯ ನಿವೃತ್ತಿ ನಂತರದ ಲಾಭಾಂಶಗಳನ್ನು ತಡೆಹಿಡಿದಿತ್ತು. 2011ರ ಜನವರಿಯಲ್ಲಿ ನಿವೃತ್ತಿ ಹೊಂದಿದ್ದ ರೋಹಿತಾ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ತಾನು ಸದ್ಯ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದೇನೆ. ಹಾಗಾಗಿ ಏರ್ ಇಂಡಿಯ ತಡೆಹಿಡಿದಿರುವ ತನ್ನ ನಿವೃತ್ತಿ ನಂತರದ ಲಾಭಾಂಶಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದರು.
ರೋಹಿತಾ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಸುನೀಲ್ ಗೌರ್, ಆರೋಪಿ ಮಹಿಳೆಯ ನಿವೃತ್ತಿ ಲಾಭಾಂಶಗಳನ್ನು ಈ ಹಿಂದಿನಂತೆ ಮುಂದುವರಿಸಬೇಕು ಎಂದು ಏರ್ ಇಂಡಿಯಗೆ ಸೂಚನೆ ನೀಡಿದ್ದಾರೆ. ರೋಹಿತಾ ದಾಸ್ ಹಾಗೂ ಇತರರು ಸೇರಿ 2004 ಮತ್ತು 2009ರ ಮಧ್ಯೆ ತೈಲಚಿತ್ರವನ್ನು ಕಳವು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಆಂತರಿಕ ತನಿಖೆಯನ್ನೂ ನಡೆಸಲಾಗಿತ್ತು. ಆ ಸಮಯದಲ್ಲಿ ರೋಹಿತಾ, ಏರ್ ಇಂಡಿಯ ಸಂಸ್ಥೆಯಲ್ಲಿ ಪ್ರಧಾನ ವ್ಯವಸ್ಥಾಪಕಿ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ತಿಂಗಳ ಆರಂಭದಲ್ಲಿ ರೋಹಿತಾಗೆ ಪಟಿಯಾಲ ನ್ಯಾಯಾಲಯ ನಿರೀಕ್ಷಣಾ ಜಾಮೀನು ನೀಡಿತ್ತು.







