ದಿಲ್ಲಿಯಲ್ಲಿ ಪ್ರತಿದಿನ ಎರಡಕ್ಕೂ ಅಧಿಕ ಮಕ್ಕಳ ಅತ್ಯಾಚಾರ

ಹೊಸದಿಲ್ಲಿ, ಮೇ20: ರಾಜಧಾನಿ ದಿಲ್ಲಿಯಲ್ಲಿ ಪ್ರತಿದಿನ ಎರಡಕ್ಕಿಂತಲೂ ಅಧಿಕ ಮಕ್ಕಳ ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ತಜ್ಞರು ಸಂತ್ರಸ ಮಕ್ಕಳ ಪುನರ್ವಸತಿಗೆ ಕರೆ ನೀಡಿದ್ದಾರೆ.
ಅತ್ಯಾಚಾರಕ್ಕೊಳಗಾದ ಮಕ್ಕಳು ಸುದೀರ್ಘ ಸಮಯ ಅದರ ಆಘಾತದಲ್ಲಿರುವ ಕಾರಣ ಅವರ ಜೀವನವನ್ನು ಪುನರ್‌ನಿರ್ಮಿಸಲು ಪುನರ್ವಸತಿಯ ಅಗತ್ಯವಿದೆ ಎಂದು ತಜ್ಞರು ತಿಳಿಸಿದ್ದಾರೆ. ಜನವರಿಯಲ್ಲಿ ವಾಯುವ್ಯ ದಿಲ್ಲಿಯ ನೇತಾಜಿ ಸುಭಾಶ್ ಪ್ಲೇಸ್‌ನಲ್ಲಿ ಎಂಟು ತಿಂಗಳ ಮಗುವಿನ ಅತ್ಯಾಚಾರ ನಡೆಸಲಾಗಿತ್ತು. ಎಪ್ರಿಲ್‌ನಲ್ಲಿ ಹತ್ತು ವರ್ಷದ ಬಾಲಕಿಯನ್ನು ಮದರಸದಲ್ಲಿ ಅತ್ಯಾಚಾರ ನಡೆಸಲಾಗಿತ್ತು. ಈ ಘಟನೆ ನಡೆದು ತಿಂಗಳುಗಳೇ ಕಳೆದರೂ ಬಾಲಕಿ ಇನ್ನೂ ಅದರ ಆಘಾತದಿಂದ ಹೊರಬಂದಿಲ್ಲ ಎಂದು ಆಕೆಯ ತಂದೆ ತಿಳಿಸಿದ್ದಾರೆ.
ಪೊಲೀಸರ ಅಂಕಿಅಂಶಗಳ ಪ್ರಕಾರ, ಈ ವರ್ಷದ ಪ್ರಥಮ ನಾಲ್ಕು ತಿಂಗಳಲ್ಲಿ ಪ್ರತಿದಿನ ಎರಡಕ್ಕಿಂತಲೂ ಅಧಿಕ ಮಕ್ಕಳ ಅತ್ಯಾಚಾರ ಪ್ರಕರಣಗಳು ನಡೆದಿವೆ. ಕಳೆದ ವರ್ಷ ಈ ಸಮಯಕ್ಕೆ 278 ಬಾಲಕಿಯರ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷ 282 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಹಲವು ಪ್ರಕರಣಗಳ ತನಿಖೆ ನಡೆಸುವ ಒತ್ತಡದಲ್ಲಿರುವುದರಿಂದ ಅವರಲ್ಲಿ ಸೂಕ್ಷ್ಮಗ್ರಹಿಕೆಯ ಕೊರತೆ ಉಂಟಾಗುತ್ತದೆ ಹಾಗೂ ಕೆಲವೊಂದು ಬಾರಿ ಹೆತ್ತವರು ಕೂಡಾ ಮಕ್ಕಳನ್ನು ಬೈಯ್ಯುತ್ತಾರೆ. ಇದರಿಂದ ಮಕ್ಕಳ ಮನಸ್ಸಿನ ಮೇಲೆ ಆದ ಆಘಾತ ಮತ್ತಷ್ಟು ಗಟ್ಟಿಯಾಗುತ್ತದೆ ಎಂದು ಹೇಳುತ್ತಾರೆ ದಿಲ್ಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಲ್.
ಇದಕ್ಕೆ ಪ್ರತಿಕ್ರಿಯಿಸಿರುವ ಪೊಲೀಸ್ ಇಲಾಖೆ, ಮಕ್ಕಳ ಅತ್ಯಾಚಾರ ಪ್ರಕರಣಗಳನ್ನು ಮಹಿಳಾ ಪೊಲೀಸ್ ಸಿಬ್ಬಂದಿ ತನಿಖೆ ನಡೆಸುವಂತೆ ಎಚ್ಚರವಹಿಸಲಾಗುತ್ತದೆ. ಆದರೆ ಕೆಲವೊಂದು ಪ್ರಕರಣಗಳಲ್ಲಿ ಸರಿಯಾ ಸಮಯದಲ್ಲಿ ಸಂತ್ರಸ್ತರ ಬಳಿ ತೆರಳದೆ ಆಗದಿದ್ದಾಗ ನಮ್ಮಲ್ಲಿ ಸೂಕ್ಷ್ಮಗ್ರಹಿಕೆಯಿಲ್ಲ ಎಂಬ ಭಾವನೆ ಮೂಡುತ್ತದೆ ಎಂದು ತಿಳಿಸಿದೆ.







