ಹನೂರು: ಜಮೀನಿಗೆ ಲಗ್ಗೆ ಇಟ್ಟ ಆನೆ; ಬೆಳೆ ನಾಶ

ಹನೂರು,ಮೇ.20: ಹನೂರು ಸಮೀಪದ ಗಂಗನದೊಡ್ಡಿ ಗ್ರಾಮದ ಪಳನಿಸ್ವಾಮಿ ಎಂಬುವವರ ಜಮೀನೊಂದಕ್ಕೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸಿದ್ದ ಆನೆಯನ್ನು ಓಡಿಸುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಮಲೈಮಹದೇಶ್ವರ ವನ್ಯಜೀವಿ ವಲಯದ ಹನೂರು ಬಫರ್ ವಲಯಕ್ಕೆ ಸೇರಿದ ಗಂಗನದೂಡ್ಡಿ ಗ್ರಾಮದ ಪಳನಿಸ್ವಾಮಿ ಎಂಬುವವರ ಜಮೀನಿಗೆ ಸಮೀಪದ ಅರಣ್ಯ ಪ್ರದೇಶದಿಂದ ಒಂಟಿ ಆನೆ ಲಗ್ಗೆ ಇಟ್ಟಿದ್ದು, ಸುಮಾರು ಮುಕ್ಕಾಲು ಏಕರೆಗಿಂತ ಹೆಚ್ಚು ಬೆಳದಿದ್ದ ಜೋಳದ ಫಸಲನ್ನು ನಾಶಪಡಿಸಿದೆ. ಸ್ಥಳೀಯರ ಸಹಾಯದಿಂದ ಮಾಹಿತಿಯನ್ನು ಪಡೆದ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಒಂಟಿ ಆನೆಯನ್ನು ಕಾಡಿಗಟ್ಟಲು ಯಶಸ್ವಿಯಾದರು .
'ಈ ಭಾಗದ ಜಮೀನಗಳಿಗೆ ಆಗಾಗ ಕಾಡಾನೆಗಳು ಲಗ್ಗೆ ಇಡುತ್ತಿದ್ದು, ಬೆಳದಿರುವ ಫಸಲನ್ನು ನಾಶಪಡಿಸುತ್ತಿದೆ. ಈ ಭಾಗದಲ್ಲಿ ತೋಟದ ಮನೆಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದ್ದು, ಇಲ್ಲಿ ವಾಸಿಸುವ ಜನರು ಭಯದಿಂದ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಅರಣ್ಯ ಅಧಿಕಾರಿಗಳು ಅಗತ್ಯ ಕ್ರಮವಹಿಸಿ' ಎಂದು ಸ್ಥಳೀಯರು ಒತ್ತಾಯಿಸಿದ್ದು, ಅಧಿಕಾರಿಗಳು ಸೂಕ್ತ ಕ್ರಮದ ಭರವಸೆ ನೀಡಿದ್ದಾರೆ ಎನ್ನಲಾಗಿದೆ.





