ತೌಡುಗೋಳಿ: ನರಿಂಗಾನ ಯುವಕ ಮಂಡಲ ವಾರ್ಷಿಕೋತ್ಸವ , ಸಾಧಕರಿಗೆ ಸನ್ಮಾನ

ಕೊಣಾಜೆ, ಮೇ 20: ಸಂಘ ಸಂಸ್ಥೆಗಳು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸುತ್ತಾ ಮುಂದೆ ಸಾಗುವುದರಿಂದ ಸಮಘದ ಹೆಸರು ಹಾಗೂ ಸದಸ್ಯರ ಕಾರ್ಯವೈಖರಿ ಜನಮಾನಸದಲ್ಲಿ ಶಾಶ್ವತವಾಗಿರಲು ಸಾಧ್ಯ ಎಂದು ಮುಡಿಪಿನ ಬ್ರೆ ಟ್ ಶಿಕ್ಷಣ ಸಮೂಹ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ಜಲೀಲ್ ಮೋಂಟುಗೋಳಿ ಹೇಳಿದರು.
ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ತೌಡುಗೋಳಿಯಲ್ಲಿ ಶನಿವಾರ ನಡೆದ ನರಿಂಗಾನ ಯುವಕ ಮಂಡಲದ ನಲ್ವತ್ತನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದರು.
ಸಂಘ ಸಂಸ್ಥೆಗಳನ್ನು ಆರಂಭಿಸುವುದು ಸುಲಭ. ಕೆಲವು ವರ್ಷಗಳ ಕಾಲ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ. ಆದರೆ ಕಾಲ ಕ್ರಮೇಣ ನೂತನ ಪದಾಧಿಕಾರಿ ಗಳು ಸಂಘದ ಎಲ್ಲ ಸದಸ್ಯರನ್ನು ಏಕ ಮನಸ್ಸಿನಿಂದ ಮುನ್ನಡೆಸುವುದು ಅವರಿಗೆ ಸವಾಲು. ಅಂತಹ ಕಾಲಘಟ್ಟದಲ್ಲಿ ಪದವಿ ಅಸೆಯಿಲ್ಲದೆ ಸೇವೆ ಗೈಯುತ್ತಿರುವ ನರಿಂಗಾನ ಯುವಕ ಮಂಡಲದ ಪ್ರತಿ ಸದಸ್ಯರ ಕಾರ್ಯವೈಖರಿ ಶ್ಲಾಘನೀಯವಾಗಿದ್ದು ಜಿಲ್ಲೆಗೆ ಮಾದರಿ ಯುವಕ ಮಂಡಲ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಗದೀಶ್ ಆಳ್ವ ಕುವ್ವೆತ್ತಬೈಲು ನುಡಿದರು.
ಕಾರ್ಯಕ್ರಮದಲ್ಲಿ ಯುವಕ ಮಂಡಲದ ಮಾಜಿ ಅಧ್ಯಕ್ಷ, ಶಿಕ್ಷಕ ಮಹಮ್ಮದ್ ಐ. ನಿಡ್ಮಾಡ್ ಹಾಗೂ ನರಿಂಗಾನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ನಿವೃತ್ತ ಹಿರಿಯ ಆರೋಗ್ಯ ನಿರೀಕ್ಷಕಿ ಸೆಲ್ವಿ ಐರಿಸ್ ಬಂಗೇರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಬಾದುಷಾ, ಉದ್ಯಮಿ ಸುಂದರ ಭಂಡಾರಿ ಭಂಡಾರಮನೆ, ರಾಜೇಶ್ ಪಿಂಟೋ, ಶಿಕ್ಷಕ ಲೋಕೇಶ್ ಎಸ್. ಸರ್ಕುಡೇಲು, ಉದ್ಯಮಿ ವಿವೇಕಾನಂದ ರೈ ನೆತ್ತಿಲಕೋಡಿ, ನರಿಂಗಾನ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೋಸೆಫ್ ಕುಟ್ಟಿನ್ಹ ತೌಡುಗೋಳಿ, ಯುವಕ ಮಂಡಲದ ಗೌರವಾಧ್ಯಕ್ಷ ಉದಯ ಶಂಕರ ಶೆಟ್ಟಿ ಬಲೆತ್ತೋಡು, ಮಾಜಿ ಆಧ್ಯಕ್ಷರುಗಳಾದ ನವೀನ್ ಶೆಟ್ಟಿ ಮಂಗಲ್ಪಾಡಿ, ವಿನೋದ್ ಸುವರ್ಣ ನಿಡ್ಮಾಡ್, ವಿಜಯ ಕುಮಾರ್ ಸರ್ಕುಡೇಲು, ದಿನೇಶ್ ಆಳ್ವ ಗರೋಡಿ, ಮುರಳೀಧರ ಶೆಟ್ಟಿ ಮೋರ್ಲ ಹಾಗೂ ಪ್ರಧಾನ ಕಾರ್ಯದರ್ಶಿ ಗಿರೀಶ್ ಆಳ್ವ ಗರೋಡಿ ಉಪಸ್ಥಿತರಿದ್ದರು.
ಯುವಕ ಮಂಡಲದ ಅಧ್ಯಕ್ಷ ಚಂದ್ರಹಾಸ್ ಎಲ್. ಸರ್ಕುಡೇಲು ಸ್ವಾಗತಿಸಿದರು. ಶೈಲೇಶ್ ಸರ್ಕುಡೇಲು ಸನ್ಮಾನಪತ್ರ ವಾಚಿಸಿದರು. ಪತ್ರಕರ್ತ ಸತೀಶ್ ಕುಮಾರ್ ಪುಂಡಿಕಾ ಕಾರ್ಯಕ್ರಮ ನಿರೂಪಿಸಿದರು.







