ಶಿವಮೊಗ್ಗ: ಸಿಡಿಲು ಬಡಿದು ಕೇರಳದ ಯುವಕ ಮೃತ್ಯು

ಶಿವಮೊಗ್ಗ, ಮೇ 20: ಟ್ರಕ್ಕಿಂಗ್‍ಗೆಂದು ಆಗಮಿಸಿದ್ದ ಕೇರಳದ ಯುವಕನೋರ್ವ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಕೊಡಚಾದ್ರಿ ಬೆಟ್ಟದಲ್ಲಿ ಭಾನುವಾರ ಮುಂಜಾನೆ ವೇಳೆ ನಡೆದಿದೆ.
ಕೇರಳ ರಾಜ್ಯದ ತ್ರಿಶೂರ್ ನಿವಾಸಿ ವಿಷ್ಣುಕುಮಾರ್ (24) ಮೃತಪಟ್ಟ ಯುವಕನೆಂದು ಗುರುತಿಸಲಾಗಿದೆ. ಈ ವೇಳೆ ಸುದೇಶ್, ಕಾಮತ್ ಎಂಬ ಯುವಕರಿಗೆ ಸಣ್ಣಪುಟ್ಟ ಗಾಯವಾಗಿದೆ. ಸ್ಥಳೀಯ ನಗರ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರಕ್ಕಿಂಗ್ ಬಂದಿದ್ದರು: ಮೃತ ವಿಷ್ಣುಕುಮಾರ್ ಸೇರಿದಂತೆ ಸುಮಾರು ನಾಲ್ಕೈದು ಜನ ಯುವಕರು ಟ್ರಕ್ಕಿಂಗ್‍ಗೆಂದು ಕೊಡಚಾದ್ರಿ ಬೆಟ್ಟಕ್ಕೆ ಬಂದಿದ್ದರು. ಕೊಡಚಾದ್ರಿ ಬೆಟ್ಟದ ಸರ್ವಜ್ಞ ಪೀಠದ ಬಳಿಯೇ ಎಲ್ಲರೂ ಮಲಗಿಕೊಂಡಿದ್ದರು. ಆದರೆ ಏಕಾಏಕಿ ಬಿರುಗಾಳಿ, ಗುಡುಗು ಸಹಿತಿ ಮಳೆ ಸುರಿಯಲಾರಂಭಿಸಿದೆ.
ಮುಂಜಾನೆ 3 ಗಂಟೆ ಸುಮಾರಿಗೆ ಸಿಡಿಲು ಬಡಿದ ಪರಿಣಾಮ ವಿಷ್ಣುಕುಮಾರ್ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದರು.







