ಶಿವಸೇನೆ ಜೊತೆ ಮೈತ್ರಿ ಮಾತುಕತೆಯಿಲ್ಲ: ಬಿಜೆಪಿ ನಾಯಕ ಮುಂಗಂತಿವಾರ್
2019ರ ಲೋಕಸಭಾ ಚುನಾವಣೆ

ಮುಂಬೈ, ಮೇ 20: 2019ರ ಲೋಕಸಭೆ ಚುನಾವಣೆ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳುವ ಕುರಿತು ಮಾತುಕತೆಯನ್ನು ಮುಂದುವರಿಸುವುದಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ರಾಜ್ಯ ಸಚಿವ ಸುಧೀರ್ ಮುಂಗಂತಿವಾರ್ ತಿಳಿಸಿದ್ದಾರೆ. ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಬೆಂಬಲ ನೀಡಲು ಸೇನೆಯ ಮನವೊಲಿಸುವ ಜವಾಬ್ದಾರಿಯನ್ನು ಹೊತ್ತಿದ್ದ ಮುಂಗಂತಿವಾರ್, ಬಿಜೆಪಿ ತನ್ನಿಂದ ಸಾಧ್ಯವಾದಷ್ಟು ಪ್ರಯತ್ನಗಳನ್ನು ಮಾಡಿದೆ. ಆದರೆ ಸೇನೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎಂದು ತಿಳಿಸಿದ್ದಾರೆ.
ಬಿಜೆಪಿ ಮತ್ತು ಸೇನೆ ಎಲ್ಲ ಚುನಾವಣೆಗಳನ್ನೂ ಜೊತೆಯಾಗಿಯೇ ಎದುರಿಸಬೇಕು ಎಂದು ನಾವು ಬಯಸಿದ್ದೆವು. ಆದರೆ ನಮ್ಮ ಮಿತ್ರ ಪಕ್ಷದಿಂದ ಯಾವುದೇ ಪ್ರತಿಕ್ರಿಯೆ ಸಿಗುತ್ತಿಲ್ಲ. ಹಾಗಾಗಿ ಸೇನೆ ಮುಂದಿನ ಹೆಜ್ಜೆಯಿಡುವವರೆಗೆ ನಾವು ನಮ್ಮ ಕಡೆಯಿಂದ ಮೈತ್ರಿ ಮಾತುಕತೆಯನ್ನು ಮುಂದುವರಿಸದಿರಲು ನಿರ್ಧರಿಸಿದ್ದೇವೆ ಎಂದು ಬಿಜೆಪಿ ನಾಯಕ ತಿಳಿಸಿದ್ದಾರೆ.
ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿರುವ ಶಿವಸೇನೆ 2019ರ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗಳಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಹೋರಾಡುವುದಾಗಿ ಜನವರಿಯಲ್ಲಿ ತಿಳಿಸಿತ್ತು. ಇಷ್ಟರವರೆಗೆ ಹಿಂದುತ್ವ ಮತಗಳನ್ನು ಒಟ್ಟಾಗಿಡಲು ಸೇನೆಯು ಮಹಾರಾಷ್ಟ್ರದಿಂದ ಹೊರಗೆ ಚುನಾವಣೆಗಳಲ್ಲಿ ಸ್ಪರ್ಧಿಸುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹಾಗೆ ಇರುವುದಿಲ್ಲ ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದರು. ಸೇನೆಯ ಮುಖ್ಯಸ್ಥ ಉದ್ಧವ್ ಠಾಕ್ರೆ ಪಕ್ಷದ ಕಾರ್ಯಗಳಲ್ಲಿ ವ್ಯಸ್ತವಾಗಿದ್ದ ಕಾರಣ ಕಳೆದ ತಿಂಗಳು ಮುಂಗಂತಿವಾರ್ ಮತ್ತು ಅವರ ನಡುವೆ ಏರ್ಪಾಡಾಗಿದ್ದ ಸಭೆಯನ್ನು ರದ್ದುಗೊಳಿಸಲಾಗಿತ್ತು. ಎರಡು ಲೋಕಸಭಾ ಸ್ಥಾನಗಳು ಮತ್ತು ಒಂದು ವಿಧಾನಸಭಾ ಕ್ಷೇತ್ರಕ್ಕೆ ಮೇ 28ರಂದು ನಡೆಯಲಿರುವ ಚುನಾವಣೆಯಲ್ಲಿ ಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿಲ್ಲ.







