ಪಾಕ್ ಸೇನೆಯಿಂದ ಕದನ ವಿರಾಮಕ್ಕೆ ವಿನಂತಿ: ಬಿಎಸ್‌ಎಫ್

ಹೊಸದಿಲ್ಲಿ, ಮೇ 20: ಗಡಿಗುಂಟ ಭಾರೀ ಶೆಲ್ಲಿಂಗ್ ಹಾಗೂ ಗುಂಡಿನ ದಾಳಿ ಮೂಲಕ ಭಾರತದ ಸೇನಾಪಡೆ ಬಲಯುತವಾಗಿ ಪ್ರತೀಕಾರ ನಡೆಸಿದ ಬಳಿಕ ಪಾಕಿಸ್ತಾನ ಪಡೆ ಕದನ ವಿರಾಮಕ್ಕೆ ಮನವಿ ಮಾಡಿದೆ.
ಅಂತಾರಾಷ್ಟ್ರೀಯ ಗಡಿಗುಂಟ ಅಪ್ರಚೋದಿತ ಶೆಲ್ಲಿಂಗ್ ಹಾಗೂ ಗುಂಡಿನ ದಾಳಿಗೆ ಭಾರತೀಯ ಗಡಿ ಭದ್ರತಾ ಪಡೆಯ ಘಟಕ ಯೋಗ್ಯ ಪ್ರತಿಕ್ರಿಯೆ ನೀಡಿದ ಬಳಿಕ ಪಾಕಿಸ್ತಾನ ಪಡೆ ಕದನ ವಿರಾಮಕ್ಕೆ ಮನವಿ ಮಾಡಿತು ಎಂದು ಗಡಿ ಭದ್ರತಾ ಪಡೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪಾಕಿಸ್ತಾನದ ದಾಳಿ ನಡೆಸುವ ಪ್ರದೇಶಕ್ಕೆ ಗಡಿ ಭದ್ರತಾ ಪಡೆಯ ಯೋಧರು ಕಳೆದ ಮೂರು ದಿನಗಳಿಂದ ನಿಖರವಾಗಿ ದಾಳಿ ನಡೆಸಿರುವುದರಿಂದ ಅಲ್ಲಿ ಭಾರೀ ನಷ್ಟ ಉಂಟಾಗಿದೆ ಎಂದು ಅವರು ಹೇಳಿದ್ದಾರೆ.
ಗಡಿ ಕಾಯುತ್ತಿರುವ ಪಾಕಿಸ್ತಾನದ ಅರೆಸೇನಾ ಪಡೆಯ ರೇಂಜರ್‌ಗಳು ರವಿವಾರ ಗಡಿ ಭದ್ರತಾ ಪಡೆಯ ಘಟಕದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ ಹಾಗೂ ಗುಂಡಿನ ದಾಳಿ ನಡೆಸುವುದನ್ನು ನಿಲ್ಲಿಸುವಂತೆ ಕೋರಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
Next Story





