'ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ತಿದ್ದುಪಡಿ ಅಗತ್ಯ'
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ

ಉಡುಪಿ, ಮೇ 20: ಮಕ್ಕಳ ಮೇಲಿನ ಅತ್ಯಾಚಾರದ ಆರೋಪಿಗಳಿಗೆ ಮರಣ ದಂಡನೆ ವಿಧಿಸುವ ಸುಗ್ರಿವಾಜ್ಞೆ ಅತ್ಯಂತ ಸ್ವಾಗತಾರ್ಹವಾಗಿದೆ. ಅದೇ ರೀತಿ 18 ವರ್ಷ ಮೇಲ್ಪಟ್ಟ ಮಹಿಳೆಯರ ಮೇಲೆ ಅತ್ಯಾಚಾರ ನಡೆದರೆ ಆರೋಪಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸುವ ರೀತಿಯಲ್ಲಿ ಕಾನೂನು ತಿದ್ದುಪಡಿ ಮಾಡುವಂತೆ ಆರು ತಿಂಗಳ ಹಿಂದೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ತಿಳಿಸಿದ್ದಾರೆ.
ಉಡುಪಿಗೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮೊದಲಿಗಿಂತ ತುಂಬಾ ಕಡಿಮೆ ಆಗಿದೆ. ಈಗಾಗಲೇ ನಾನು ರಾಜ್ಯದ ಸುಮಾರು 27 ಜಿಲ್ಲೆಗಳಿಗೆ ಭೇಟಿ ನೀಡಿ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆ ಸಿದ್ದೇನೆ. ಆಯೋಗದ ಚಿತ್ತ ಜಿಲ್ಲಾಡಳಿತದತ್ತ ಕಾರ್ಯಕ್ರಮದಲ್ಲಿ ಮಹಿಳಾ ಆಯೋಗ ಜನರ ಬಳಿ ಹೋಗಿ ಅವರ ಸಮಸ್ಯೆಗಳನ್ನು ಆಲಿಸುತ್ತಿದೆ ಎಂದರು.
ಗುಲ್ಬರ್ಗದಲ್ಲಿ ನಾಲ್ಕು ಖಾಸಗಿ ನರ್ಸಿಂಗ್ ಹೋಮ್‌ಗಳಲ್ಲಿ ಹಣದ ಆಸೆಗಾಗಿ ಸುಮಾರು 2200 ಹೆಣ್ಣು ಮಕ್ಕಳ ಗರ್ಭಕೋಶವನ್ನು ತೆಗೆಯಲಾ ಗಿತ್ತು. ಯಾದಗಿರಿಯಲ್ಲಿ ಹೆರಿಗೆ ಸಂದರ್ಭದಲ್ಲಿ ಸಾಮಾನ್ಯ ಹೆರಿಗೆ ಮಾಡದೆ ಶಸ್ತ್ರಚಿಕಿತ್ಸೆ ಮಾಡುವ ವ್ಯವಸ್ಥೆಗಳು ನಡೆದುಕೊಂಡು ಬರುತ್ತಿವೆ. ಹಾವೇರಿ ಜಿಲ್ಲೆ ಯಲ್ಲಿ ಸರಕಾರಿ ಆಸ್ಪತ್ರೆಯಲ್ಲಿ 3000ಕ್ಕೂ ಅಧಿಕ ಮಹಿಳೆಯರ ಗರ್ಭಕೋಶ ತೆಗೆದ ಪ್ರಕರಣಗಳು ವರದಿಯಾಗಿತ್ತು. ಈ ಎಲ್ಲ ಪ್ರಕರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಕಮಿಟಿ ರಚಿಸಿ ಸರಕಾರಕ್ಕೆ ಒಪ್ಪಿಸಲಾಗಿತ್ತು. ಮುಂದಿನ ಸರಕಾರ ಈ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದು ನೋಡಬೇಕು ಎಂದು ಅವರು ತಿಳಿಸಿದರು.
ಕೆಲ ಸಮಯಗಳ ಹಿಂದೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದೆ. ಅಲ್ಲಿ ವೈದ್ಯರು ಹಾಗೂ ಸರಿಯಾದ ನಿರ್ವಹಣೆ ಇಲ್ಲದೆ ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿಗೆ ಬೇರೆ ಆಸ್ಪತ್ರೆಯ ಇಬ್ಬರು ವೈದ್ಯರನ್ನು ವರ್ಗಾವಣೆ ಮಾಡಿಸಿದ್ದೆ. ಜೈಲಿನಲ್ಲಿ ಮಹಿಳೆಯರ ಪರಿಸ್ಥಿತಿ ಯಾವ ರೀತಿ ಇದೆ ಎಂಬುದರ ಬಗ್ಗೆ ಆಯೋಗ ಅಲೋಕನ ಮಾಡುತ್ತಿದೆ. ಅದಕ್ಕಾಗಿ ಪ್ರತಿ ಜಿಲ್ಲೆಯ ಜೈಲಿಗೆ ಭೇಟಿ ನೀಡಲಾಗುತ್ತದೆ ಎಂದು ಅವರು ಹೇಳಿದರು.
ನೀತಿ ಸಂಹಿತೆ: ಕಾರ್ಯಕ್ರಮ ರದ್ದು
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಇಂದು ಉಡುಪಿ ಜಿಲ್ಲಾಸ್ಪತ್ರೆ ಹಾಗೂ ಕಾರಾಗೃಹ ಭೇಟಿ ಮತ್ತು ನಾಳಿನ ಕುಂದಾಪುರ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ.
‘ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಆಸ್ಪತ್ರೆ ಭೇಟಿ ಸಾಧ್ಯವಾಗಿಲ್ಲ. ಆ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು, ಉಡುಪಿ ಆಸ್ಪತ್ರೆಯಲ್ಲಿ ಒಟ್ಟು 124 ಬೆಡ್ ಗಳಿದ್ದು, 29 ವೈದ್ಯರು ಹಾಗೂ 16 ಮಂದಿ ನರ್ಸ್‌ಗಳಿದ್ದಾರೆ. ಆದರೂ ವೈದ್ಯರು ಹಾಗೂ ನರ್ಸ್‌ಗಳ ಅಗತ್ಯ ಈ ಆಸ್ಪತ್ರೆಗೆ ಇದೆ ಎಂದು ನಾಗಲಕ್ಷ್ಮೀ ಬಾಯಿ ತಿಳಿಸಿದರು.
ಉಡುಪಿ ಸರಕಾರಿ ಆಸ್ಪತ್ರೆಯಲ್ಲಿ ತಿಂಗಳಿಗೆ 60-70 ಹೆರಿಗೆಯಾಗುತ್ತಿದ್ದು, ಹೆರಿಗೆ ಸಂದರ್ಭ ಮಕ್ಕಳ ಮರಣ ಸಂಖ್ಯೆ ತುಂಬಾ ಕಡಿಮೆ ಇದೆ. ಮುಂದಿನ ತಿಂಗಳು ಮತ್ತೆ ಜಿಲ್ಲೆಗೆ ಆಗಮಿಸಿ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು. ಆಗ ಜಿಲ್ಲೆಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣ ಗಳು, ಮಕ್ಕಳ ಮೇಲಿನ ಲೈಂಗಿಕ ಕಿರುಕುಳ, ಕೆಲಸದ ಸ್ಥಳದಲ್ಲಿ ಕಿರುಕುಳಗಳ ಬಗ್ಗೆ ಪರಿಶೀಲಿಸಲಾಗುವುದು. ಆ ಸಂದರ್ಭ ಆಸ್ಪತ್ರೆ ಹಾಗೂ ಜೈಲಿಗೆ ಭೇಟಿ ನೀಡಲಾಗುವುದು ಎಂದರು.







