ಯಡಿಯೂರಪ್ಪರ ರಾಜಿನಾಮೆ ಸುದ್ಧಿ ಕೇಳಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿ

ಚನ್ನಗಿರಿ,ಮೇ.20: ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಸುದ್ಧಿ ಕೇಳಿ ವೀರಶೈವ ಲಿಂಗಾಯತ ಮುಖಂಡರೊಬ್ಬರು ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಾಲೂಕಿನ ಸಂತೇಬೆನ್ನೂರು ಗ್ರಾಮದಲ್ಲಿ ಘಟನೆ ನಡೆದಿದೆ.
ತಾಲೂಕಿನ ಸಂತೇಬೆನ್ನೂರು ಗ್ರಾಮದ ಹುಣಸೆಮರದ ಚನ್ನಬಸಪ್ಪ (70) ಮೃತಪಟ್ಟ ವ್ಯಕ್ತಿ. ಚನ್ನಬಸಪ್ಪ ವೀರಶೈವ ಲಿಂಗಾಯತ ಮುಖಂಡರಾಗಿದ್ದು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಸಂಭ್ರಮಾಚರಣೆ ಮಾಡಿ, ಸಂಬಂಧಿಕರಿಗೆ ಪೋನ್ ಮಾಡಿ ಸಂತೋಷ ಹಂಚಿಕೊಂಡಿದ್ದರು. ಆದರೆ, ಶನಿವಾರ ಸಂಜೆ ಬಿ.ಎಸ್.ಯಡಿಯೂರಪ್ಪನವರು ಬಹುಮತ ಸಾಬೀತು ಮಾಡಲಾಗದೇ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಸುದ್ದಿಯನ್ನು ಟಿವಿಯಲ್ಲಿ ನೋಡುತ್ತಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತರು ಪತ್ನಿ, ನಾಲ್ಕು ಮಕ್ಕಳು ಮತ್ತು ಮೊಮ್ಮಕ್ಕಳನ್ನು ಆಗಲಿದ್ದಾರೆ. ಭಾನುವಾರ ತಮ್ಮ ಜಮೀನಿನಲ್ಲಿಯೇ ಅವರ ಶವಸಂಸ್ಕಾರವನ್ನು ನೇರವೇರಿಸಲಾಯಿತು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅಂತ್ಯಸಂಸ್ಕಾರದಲ್ಲಿ ನೂತನ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತಿತರರು ಪಾಲ್ಗೊಂಡಿದ್ದರು.





