ತುಮಕೂರು: ಮಂತ್ರಿ ಸ್ಥಾನಕ್ಕಾಗಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರ ನಡುವೆ ಪೈಪೋಟಿ

ತುಮಕೂರು,ಮೇ.20: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‍ಗಳ ಮೈತ್ರಿ ಸರಕಾರ ರಚನೆಯಾಗುವುದು ಖಚಿತವಾಗುತ್ತಿದ್ದಂತೆಯೇ ಮಂತ್ರಿ ಸ್ಥಾನಕ್ಕಾಗಿ ಹಿರಿಯ ಜನಪ್ರತಿನಿಧಿಗಳ ನಡುವೆ ಲಾಭಿ ಆರಂಭವಾಗಿದ್ದು, ಜಿಲ್ಲೆಗೆ ಕನಿಷ್ಠ ಎರಡು ಸಚಿವ ಸ್ಥಾನಗಳನ್ನು ಪಡೆಯುವ ನಿಟ್ಟಿನಲ್ಲಿ ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷದ ನಾಲ್ಕು ಮತ್ತು ಕಾಂಗ್ರೆಸ್ ಪಕ್ಷದಿಂದ ಮೂವರು ಶಾಸಕರು ಆಯ್ಕೆಯಾಗಿದ್ದು, ಇವರಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್ ಪ್ರಮುಖರು. ಒಂದು ಹಂತದಲ್ಲಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಡಿ.ಸಿ.ಎಂ ಪಟ್ಟ ನೀಡುವ ಬಗ್ಗೆ ಅಂತಿಮ ತೀರ್ಮಾನಗಳಾಗಿವೆ ಎನ್ನಲಾಗಿದೆ.
ಈ ಹಿಂದಿನ ಸರಕಾರಗಳಲ್ಲಿ ಅಂದರೆ 2004 ರಲ್ಲಿ ಮತ್ತು 2006ರಲ್ಲಿ ರಚನೆಯಾದ ಎರಡು ಸಮ್ಮಿಶ್ರ ಸರಕಾರಗಳಲ್ಲಿ ಜಿಲ್ಲೆಗೆ ಎರಡು ಸಚಿವ ಸ್ಥಾನಗಳನ್ನು ನೀಡಿದ್ದನ್ನು ಕಾಣಬಹುದಾಗಿದೆ. 2004 ರ ಕಾಂಗ್ರೆಸ್-ಬಿಜೆಪಿ ಸಮಿಶ್ರ ಸರಕಾರದಲ್ಲಿ ಸಿ.ಚನ್ನಿಗಪ್ಪ, ಬಿ.ಸತ್ಯನಾರಾಯಣ, 2006ರ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಚನ್ನಿಗಪ್ಪ ಮತ್ತು ಸೊಗಡು ಶಿವಣ್ಣ ಅವರು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. 2004ರಲ್ಲಿ ಕಾಂಗ್ರೆಸ್ ಕೇವಲ 1 ಸ್ಥಾನ ಪಡೆದಿತ್ತು. ಆದರೆ ಈ ಬಾರಿ 3 ಸ್ಥಾನಗಳನ್ನು ಪಡೆದಿದೆ. ಪಾವಗಡದ ಶಾಸಕ ವೆಂಕಟರಣಪ್ಪ ಈಗಾಗಲೇ 2008ರ ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಕೆಲಸ ಮಾಡಿದ್ದು, ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ ಎನ್ನಲಾಗಿದೆ.
ಉಳಿದಂತೆ ಜೆಡಿಎಸ್ ನಿಂದ ಸತತ ನಾಲ್ಕು ಬಾರಿ ಗೆದ್ದಿರುವ ಎಸ್.ಆರ್.ವಾಸು(ಶ್ರೀನಿವಾಸ್)ಹಾಗೂ ಶಿರಾ ಕ್ಷೇತ್ರದ ಶಾಸಕ ಬಿ.ಸತ್ಯನಾರಾಯಣ ಅವರು ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದು, ಈ ನಡುವೆ ನಿವೃತ್ತ ಹಿರಿಯ ಐಎಎಸ್ ಅಧಿಕಾರಿ ಎಂ.ವಿ.ವೀರಭದ್ರಯ್ಯ ಸಹ ಪಕ್ಷ ನೀಡುವ ಜವಾಬ್ದಾರಿ ನಿಭಾಯಿಸಲು ಸಿದ್ಧ ಎಂದು ಹೇಳುವ ಮೂಲಕ ತಾನು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ತೇಲಿಬಿಟ್ಟಿದ್ದಾರೆ.
ಕಾಂಗ್ರೆಸ್ ನ ಡಾ.ಜಿ.ಪರಮೇಶ್ವರ್, ವೆಂಕಟರವಣಪ್ಪ, ಜೆಡಿಎಸ್‍ನ ವಾಸು, ಸತ್ಯನಾರಾಯಣ ಮತ್ತು ವೀರಭದ್ರಯ್ಯ ನಡುವೆ ಎಷ್ಟು ಜನರಿಗೆ ಮಂತ್ರಿ ಗಿರಿ ಒಲಿಯಲಿದೆ ಎಂಬುದು ಕುತೂಹಲದ ಪ್ರಶ್ನೆ. ಈಗಾಗಲೇ ಡಾ.ಜಿ.ಪರಮೇಶ್ವರ್ ಅವರಿಗೆ ಸಚಿವ ಸ್ಥಾನ ಗಟ್ಟಿಯಾದಂತಾಗಿದ್ದು, ಉಳಿದ ನಾಲ್ವರಲ್ಲಿ ಲಭ್ಯವಿರುವ ಒಂದು ಸಚಿವ ಸ್ಥಾನಕ್ಕೆ ಯಾರು ಲಾಭಿ ನಡೆಸಿ ಯಶಸ್ಸು ಗಳಿಸಲಿದ್ದಾರೆ ಎಂಬುದು ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಜೆಡಿಎಸ್‍ನಲ್ಲಿ ವಯಸ್ಸಿನಲ್ಲಿ ಹಿರಿಯರನ್ನು ತೆಗೆದುಕೊಂಡರೆ ಬಿ.ಸತ್ಯನಾರಾಯಣ ಅವರಿದ್ದರೂ, ಸತತವಾಗಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಹಾಗೂ ಹೆಚ್.ಡಿ.ಕೆ.ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಎಸ್.ಆರ್.ಶ್ರೀನಿವಾಸ್‍ಗೆ ಮಂತ್ರಿ ಸ್ಥಾನ ನೀಡಿದರೆ 2019ರಲ್ಲಿ ಎದುರಾಗುವ ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗರು ಹಾಗೂ ಇತರೆ ಹಿಂದುಳಿದ ವರ್ಗದ ಮತಗಳನ್ನು ಸೆಳೆಯಬಹುದು ಎಂಬುದು ಅವರ ಆಪ್ತರ ಲೆಕ್ಕಾಚಾರವಾಗಿದೆ.
ಪಾವಗಡ ಕ್ಷೇತ್ರದಲ್ಲಿ ಒಂದು ರೀತಿಯಲ್ಲಿ ಕೊನೆಗಳಿಗೆಯಲ್ಲಿ ಗೆಲುವು ಸಾಧಿಸಿ, ಕಾಂಗ್ರೆಸ್ ಪಕ್ಷವನ್ನು ಉಳಿಸಿರುವ ವೆಂಕಟರವಣಪ್ಪ ಅವರಿಗೆ ಮಂತ್ರಿ ಸ್ಥಾನ ನೀಡುವುದು ಹೆಚ್ಚು ಸೂಕ್ತ ಎಂಬ ಮಾತುಗಳು ಕೇಳಿ ಬಂದಿದ್ದು, ಅವರು ಸಹ ಕೆಪಿಸಿಸಿ ಅಧ್ಯಕ್ಷರ ಮುಂದಾಳತ್ವದಲ್ಲಿ ಪಕ್ಷದ ಮುಖಂಡರ ಮೇಲೆ ಒತ್ತಡ ಹಾಕಿಸುತ್ತಿದ್ದು, ಮೇ.23ರ ಬುಧವಾರದ ಒಳಗೆ ಜಿಲ್ಲೆಗೆ ದಕ್ಕಬೇಕಾಗಿರುವ ಮತ್ತೊಂದು ಸಚಿವ ಸ್ಥಾನದ ಬಗ್ಗೆ ತೀರ್ಮಾನವಾಗಬೇಕಾಗಿದೆ.
ಒಟ್ಟಾರೆ ಜಿಲ್ಲೆಯ ಪ್ರಮುಖ ಹಿರಿಯ ನಾಯಕರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದಲ್ಲಿರುವ ತಮ್ಮ ಹಿರಿಯ ನಾಯಕರ ಮೂಲಕ ಮಂತ್ರಿ ಸ್ಥಾನಕ್ಕೆ ಒತ್ತಡ ಹಾಕಿಸುತ್ತಿದ್ದು, ಎರಡನೇ ಮಂತ್ರಿಯಾರಾಗಲಿದ್ದಾರೆ ಎಂಬುವುದೇ ಕುತೂಹಲದ ಪ್ರಶ್ನೆಯಾಗಿದೆ.







