ಸುಂಟಿಕೊಪ್ಪ ಆಸ್ಪತ್ರೆಯಲ್ಲಿ ದಾಂಧಲೆ: ಆರೋಪಿಗಳ ಪತ್ತೆಗೆ ಪೊಲೀಸರಿಂದ ಕ್ರಮ

ಮಡಿಕೇರಿ,ಮೇ.20: ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಕಾರಿನಲ್ಲಿ ಬಂದ ಕೆಲ ದುಷ್ಕರ್ಮಿಗಳು ವೈದ್ಯರನ್ನು ಕರೆಸಬೇಕೆಂದು ಪಟ್ಟು ಹಿಡಿದು ಆಸ್ಪತ್ರೆಯ ನಾಮಫಲಕ ಹಾಗೂ ಇತರ ವಸ್ತುಗಳನ್ನು ಧ್ವಂಸಗೊಳಿಸಿದ್ದಲ್ಲದೆ ದಾಂಧಲೆ ನಡೆಸಿ ಶುಶ್ರೂಷರಿಗೆ ಹಾಗೂ ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡಿದ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.
ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 10ರಿಂದ 15 ಮಂದಿಯ ತಂಡ ವ್ಯಕ್ತಿಯೋರ್ವನಿಗೆ ಚಿಕಿತ್ಸೆ ಕೊಡಿಸಲೆಂದು ಬಂದಿದ್ದಾರೆ. ಶುಶ್ರೂಷಕಿ ರೋಹಿಣಿ, ಡಿ ಗ್ರೂಪ್ ಸಿಬ್ಬಂದಿ ಸುಜಾತ, ಆರೋಗ್ಯ ನಿರೀಕ್ಷಕ ನಾಗೇಂದ್ರ ಆಚಾರಿ ಆಸ್ಪತ್ರೆಯಲ್ಲಿದ್ದು, ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡುತ್ತಿದ್ದ ಸಂದರ್ಭ ವೈದ್ಯರನ್ನು ಕರೆಸಬೇಕೆಂದು ಸಿಬ್ಬಂದಿಗಳಿಗೆ ಹೇಳಿದ್ದಲ್ಲದೆ, ವೈದ್ಯರ ಸ್ಟೆಥೋಸ್ಕೋಪ್, ಆಸ್ಪತ್ರೆಯ ನಾಮಫಲಕ, ವೈದ್ಯರ ನಾಮಫಲಕಗಳನ್ನು ಒಡೆದು ಹಾಕಿ ನಾಶಗೊಳಿಸಿ ಭಯದ ವಾತಾವರಣ ಸೃಷ್ಟಿಸಿ ನಂತರ ಆಸ್ಪತ್ರೆಯಿಂದ ಪಲಾಯನಗೈದಿದ್ದಾರೆ ಎಮದು ಆರೋಪಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನಿವಾಸಿಗಳಾದ ಉಸ್ಮಾನ್, ಶರೀಫ್ ಹಾಗೂ ಕೆ.ಎ.ಉಸ್ಮಾನ್ ಅವರ ಮಗ ಫಾಸಿಲ್ ಉಸ್ಮಾನ್ ಸೇರಿದಂತೆ 15 ಮಂದಿ ವಿರುದ್ಧ ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿರುವುದು, ಸರಕಾರಿ ವಸ್ತುಗಳನ್ನು ಧ್ವಂಸಗೊಳಿಸಿದ್ದಲ್ಲದೆ, ಸಿಬ್ಬಂದಿಗಳಿಗೆ ಬೆದರಿಕೆ ಒಡ್ಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಮ್ ಆವರು ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದ್ದು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.





