ಕಾಶ್ಮೀರ ನಿರ್ಣಯ ಅನುಷ್ಠಾನದಲ್ಲಿ ಆಯ್ಕೆ ಬೇಡ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪಾಕ್ ರಾಯಭಾರಿ ಒತ್ತಾಯ

ವಿಶ್ವಸಂಸ್ಥೆ, ಮೇ 20: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ತನ್ನ ನಿರ್ಣಯಗಳನ್ನು, ಅದರಲ್ಲೂ ಮುಖ್ಯವಾಗಿ ಜಮ್ಮು ಮತ್ತು ಕಾಶ್ಮೀರ ಮತ್ತು ಫೆಲೆಸ್ತೀನ್ ಮುಂತಾದ ದೀರ್ಘಕಾಲೀನ ವಿವಾದಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಜಾರಿಗೊಳಿಸುವಾಗ ‘ಆಯ್ಕೆ’ ಮಾಡುವುದನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನ ಹೇಳಿದೆ.
‘ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಪಾಲನೆಯಲ್ಲಿ ಅಂತಾರಾಷ್ಟ್ರೀಯ ಕಾನೂನನ್ನು ಎತ್ತಿಹಿಡಿಯುವುದು’ ಎಂಬ ವಿಷಯಕ್ಕೆ ಸಂಬಂಧಿಸಿ ಭದ್ರತಾ ಮಂಡಳಿಯಲ್ಲಿ ನಡೆದ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ವಿಶ್ವಸಂಸ್ಥೆಗೆ ಪಾಕಿಸ್ತಾನದ ರಾಯಭಾರಿ ಮಲೀಹಾ ಲೋಧಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ಭದ್ರತಾ ಮಂಡಳಿಯು ತನ್ನ ಕೃತ್ಯಗಳಲ್ಲಿ ಹೆಚ್ಚು ಸ್ಥಿರ ಮತ್ತು ನಿಷ್ಪಕ್ಷಪಾತವಾಗಿರಬೇಕು. ಜಮ್ಮು ಮತ್ತು ಕಾಶ್ಮೀರ ಹಾಗೂ ಫೆಲೆಸ್ತೀನ್ ಮುಂತಾದ ದೀರ್ಘಾವಧಿ ವಿವಾದಗಳಿಗೆ ಸಂಬಂಧಿಸಿದ ನಿರ್ಣಯಗಳನ್ನು ಜಾರಿಗೊಳಿಸುವಾಗ ಆಯ್ಕೆ ಮಾಡುವುದು ನಿಲ್ಲಬೇಕು. ಯಾಕೆಂದರೆ, ನ್ಯಾಯವಿಲ್ಲದೆ ಶಾಂತಿ ನೆಲೆಸದು’’ ಎಂದು ಲೋಧಿ ಹೇಳಿದರು.
ವಿಶ್ವಸಂಸ್ಥೆಯ ವಿವಿಧ ವೇದಿಕೆಗಳಲ್ಲಿ ಲೋಧಿ ಮತ್ತು ಪಾಕಿಸ್ತಾನಿ ನಿಯೋಗ ನಿರಂತರವಾಗಿ ಕಾಶ್ಮೀರ ವಿವಾದವನ್ನು ಪ್ರಸ್ತಾಪಿಸುತ್ತಿದೆ.







