ಪಾಕ್ ಆಕ್ರಮಿತ ಕಾಶ್ಮೀರ, ಬಾಲ್ಟಿಸ್ತಾನ್‌ಗೆ ಹೆಚ್ಚಿನ ಸ್ವಾಯತ್ತೆ: ಪಾಕ್ ಹಿರಿಯ ನಾಯಕರ ನಿರ್ಧಾರ
ಇಸ್ಲಾಮಾಬಾದ್, ಮೇ 20: ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ಗೆ ಹೆಚ್ಚಿನ ಆಡಳಿತಾತ್ಮಕ ಮತ್ತು ಆರ್ಥಿಕ ಅಧಿಕಾರ ನೀಡಲು ಪಾಕಿಸ್ತಾನದ ಉನ್ನತ ನಾಗರಿಕ ಮತ್ತು ಸೇನಾ ನಾಯಕರು ನಿರ್ಧರಿಸಿದ್ದಾರೆ.
ವಿವಾದಾತ್ಮಕ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಈ ವಲಯದ ಮೂಲಕ ಹಾದುಹೋಗುವುದನ್ನು ಸ್ಮರಿಸಬಹುದಾಗಿದೆ.
ಪಾಕಿಸ್ತಾನದ ಉನ್ನತ ನಾಗರಿಕ ಮತ್ತು ಸೇನಾ ಸಂಸ್ಥೆಯಾಗಿರುವ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್‌ಸಿ) ಸಭೆಯೊಂದರಲ್ಲಿ, ಯೋಜನಾ ಆಯೋಗದ ಉಪಾಧ್ಯಕ್ಷ ಸರ್ತಾಝ್ ಅಝೀಝ್, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್‌ನ ಸುಧಾರಣಾ ಪ್ರಸ್ತಾಪಗಳ ಬಗ್ಗೆ ಶನಿವಾರ ವಿವರಣೆ ನೀಡಿದರು ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ.
ಪ್ರಧಾನಿ ಶಾಹಿದ್ ಖಾಕನ್ ಅಬ್ಬಾಸಿ ಅಧ್ಯಕ್ಷತೆ ವಹಿಸಿದ ಸಭೆಯು ಈ ಪ್ರಸ್ತಾಪಗಳ ಬಗ್ಗೆ ಚರ್ಚೆ ನಡೆಸಿತು. ವಿಸ್ತೃತ ಚರ್ಚೆಯ ಬಳಿಕ, ಪಾಕ್ ಆಕ್ರಮಿತ ಕಾಶ್ಮೀರ ಸರಕಾರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸರಕಾರಕ್ಕೆ ಹೆಚ್ಚಿನ ಆಡಳಿತಾತ್ಮಕ ಮತ್ತು ಹಣಕಾಸು ಅಧಿಕಾರಗಳನ್ನು ನೀಡಲು ಸಭೆ ಒಪ್ಪಿಗೆ ನೀಡಿತು ಎಂದು ಹೇಳಿಕೆ ಹೇಳಿದೆ.
ಆಡಳಿತಾತ್ಮಕ ಮತ್ತು ಆರ್ಥಿಕ ಸುಧಾರಣೆಯ ವಿವರಗಳನ್ನು ತಕ್ಷಣಕ್ಕೆ ಬಿಡುಗಡೆ ಮಾಡಲಾಗಿಲ್ಲ.





