ಕ್ಯೂಬಾ: ವಿಮಾನ ಅಪಘಾತ; ಮೃತರ ಸಂಖ್ಯೆ 110

ಹವಾನಾ (ಕ್ಯೂಬಾ), ಮೇ 20: ಕ್ಯೂಬಾದಲ್ಲಿ ಶುಕ್ರವಾರ ನಡೆದ ವಿಮಾನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 110 ಎಂಬುದಾಗಿ ಅಧಿಕೃತವಾಗಿ ಪ್ರಕಟಿಸಲಾಗಿದೆ. ಕ್ಯೂಬಾವು ವಾರಾಂತ್ಯದ ಶೋಕಾಚರಣೆಯಲ್ಲಿದೆ.
40 ವರ್ಷ ಹಳೆಯ ಬೋಯಿಂಗ್ 737-200 ವಿಮಾನವು ಹವಾನಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಸಮೀಪದ ಹೊಲವೊಂದರಲ್ಲಿ ಪತನಗೊಂಡಿತ್ತು.
ವಿಮಾನದಿಂದ ಮೂವರು ಮಹಿಳೆಯರನ್ನು ಜೀವಂತವಾಗಿ ಹೊರಗೆಳೆಯಲಾಗಿತ್ತು. ಅವರು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಪರಿಸ್ಥಿತಿ ಗಂಭೀರವಾಗಿದೆ.
ಇಂಥದೇ ಸನ್ನಿವೇಶದಲ್ಲಿ ಸುಮಾರು 30 ವರ್ಷಗಳ ಹಿಂದೆ ಕ್ಯೂಬಾದಲ್ಲಿ ವಿಮಾನ ದುರಂತವೊಂದು ಸಂಭವಿಸಿತ್ತು. 1989 ಸೆಪ್ಟಂಬರ್‌ನಲ್ಲಿ ಹವಾನಾದಿಂದ ಇಟಲಿಗೆ ಹೊರಡುತ್ತಿದ್ದ ವಿಮಾನ ಹಾರಾಟ ಆರಂಭದಲ್ಲೇ ಪತನಗೊಂಡು 126 ಮಂದಿ ಮೃತಪಟ್ಟಿದ್ದರು.
ಆ ಬಳಿಕ ನಡೆದ ಭೀಕರ ವಿಮಾನ ಅಪಘಾತ ಇದಾಗಿದೆ.
Next Story





