ಮೈತ್ರಿ ಸರಕಾರದ ಬಗ್ಗೆ ಅಪಪ್ರಚಾರ ಸರಿಯಲ್ಲ: ಬಸವರಾಜ ಹೊರಟ್ಟಿ

ಬೆಂಗಳೂರು, ಮೇ 22: ಮಾಜಿ ಪ್ರಧಾನಿ ದೇವೇಗೌಡ ರಾಜ್ಯ ಸರಕಾರದ ಯಾವುದೇ ಅಧಿಕಾರಿಗಳನ್ನು ಕರೆಸಿಕೊಂಡು ಸಭೆ ನಡೆಸಿಲ್ಲ. ಕಾಂಗ್ರೆಸಿನ ಯಾವುದೇ ಶಾಸಕರಿಗೆ ಸಚಿವ ಸ್ಥಾನ ನೀಡಿ ಎಂದೂ ಸೂಚಿಸಿಲ್ಲ. ಆದರೆ, ಈ ವಿಚಾರದಲ್ಲಿ ಬಿಜೆಪಿಯವರು ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ಟೀಕಿಸಿದ್ದಾರೆ.
ಮಂಗಳವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ದೇವೇಗೌಡ ಯಾವುದೇ ಅಧಿಕಾರಿಗಳನ್ನು ಕರೆಸಿಕೊಂಡು ಸಭೆ ನಡೆಸಿಲ್ಲ. ಸರಕಾರ ರಚನೆ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಆದರೆ, ಬಿಜೆಪಿಯವರು ಮೈತ್ರಿ ಸರಕಾರದಲ್ಲಿ ಒಡಕು ಮೂಡಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ದೂರಿದರು.
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಐದೂ ವರ್ಷ ಅವಧಿ ಪೂರ್ಣಗೊಳಿಸಲಿದ್ದು, ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಂಡು ನಾವು ಮಾದರಿ ಆಡಳಿತ ನೀಡಲಿದ್ದೇವೆ ಎಂದ ಅವರು, ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡಿದ್ದು, ಉಪ ಮುಖ್ಯಮಂತ್ರಿ ಯಾರಾಗಬೇಕೆಂಬುದು ಕಾಂಗ್ರೆಸ್ ಆಂತರಿಕ ವಿಷಯ ಎಂದರು.
ದೇವೇಗೌಡರು ಹಿರಿಯರು, ಅಗತ್ಯವಿದ್ದಾಗ ಅವರ ಮಾರ್ಗದರ್ಶನವನ್ನೂ ಪಡೆಯುತ್ತೇವೆ. ಆದರೆ, ಬಿಜೆಪಿ ಮುಖಂಡರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಆರೇ ತಿಂಗಳಿಗೆ ಬೀಳುತ್ತದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಪೂರ್ಣಾವಧಿ ಅಧಿಕಾರ ಮಾಡುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದರು.
ನಾವು ಎರಡೂ ಪಕ್ಷದ ಮೈತ್ರಿಯಲ್ಲಿ ಆಡಳಿತ ನಡೆಸಿದ್ದೇವೆ. ಹೇಗೆ ಇರಬೇಕು ಎಂಬುದು ನಮಗೆ ಗೊತ್ತಿದೆ ಎಂದ ಅವರು, ದೇಶದಲ್ಲಿಂದು ಅಘೋಷಿತ ತುರ್ತು ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ವಿವಿಧ ಪ್ರಾದೇಶಿಕ ಪಕ್ಷಗಳು ಜಾತ್ಯತೀತ ನಿಲುವು ಹೊಂದಿರುವ 21 ರಾಜ್ಯಗಳ ಮುಖಂಡರು ನಾಳಿನ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.







