ಮೇ 29 : ಬಾಕಿ ವೇತನಕ್ಕೆ ಒತ್ತಾಯಿಸಿ ಧರಣಿ
ಬೆಳ್ತಂಗಡಿ,ಮೇ 22: ದಿನಾಂಕ 01.04.2018 ರಿಂದ ಬೀಡಿ ಮಾಲಕರು ಬೀಡಿಕಾರ್ಮಿಕರಿಗೆ ನೀಡಬೇಕಾಗಿದ್ದ 1000 ಬೀಡಿಗೆ ರೂ.220.50 ವೇತನವನ್ನು ಇನ್ನೂ ನೀಡದೆ ಇರುವುದನ್ನು ಖಂಡಿಸಿ ಮೇ 29 ರಂದು ಮಾರ್ಕ್ಸ್ ವಾದಿ ಜನಾಂದೋಲನ ಸಂಘಟನೆಗಳ ಒಕ್ಕೂಟದ ಸಿಐಟಿಯುಗೆ ಸಂಯೋಜಿತಗೊಂಡಿರುವ ಬೆಳ್ತಂಗಡಿ ತಾಲೂಕು ಬೀಡಿ ಕೆಲಸಗಾರರ ಸಂಘದ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ಕಚೇರಿ ಎದುರು ಹಾಗೂ ಬಳಿಕ ನಿರಂತರ ನ್ಯಾಯ ಸಿಗುವ ತನಕ ಬೀಡಿ ಡಿಪೋಗಳಲ್ಲಿ ದರಣಿ ಕುಳಿತು ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಘದ ಅದ್ಯಕ್ಷರಾದ ಬಿ.ಎಂ.ಭಟ್ ಕಾರ್ಯದರ್ಶಿ ದೇವಕಿ ಕೋಶಾದಿಕಾರಿ ಜಯರಾಮ ಮಯ್ಯ ಅವರುಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕನಿಷ್ಟ ವೇತನ ಜಾರಿ ಮಾಡುವುದು ಸೇರಿದಂತೆ ಕಳೆದ 3 ವರ್ಷಗಳಿಂದ ಬೀಡಿ ಮಾಲಕರು ಬಾಕಿ ಮಾಡಿದ ತುಟ್ಟಿಬತ್ತೆ 1000 ಬೀಡಿಗೆ ಬೋನಸ್ ಸೇರಿ ರೂ.13-00 ನ್ನು ತಕ್ಷಣ ಪಾವತಿಸಲು ಕೂಡಾ ಒತ್ತಾಯಿಸಲಿದ್ದೇವೆ ಎಂದವರು ತಿಳಿಸಿದರು. ಜಿಲ್ಲೆಯ ಲಕ್ಷಾಂತರ ಬೀಡಿಕಾರ್ಮಿಕರಿಗೆ ಮೂರು ವರ್ಷಗಳಿಂದ ತಲಾ ಸಾವಿರಾರು ರೂಪಾಯಿ ಮಜೂರಿ ಬಾಕಿ ಮಾಡಿದ್ದಲ್ಲದೆ, ಇದೀಗ ನೂತನ ಪರಿಷ್ಕೃತ ಮಜೂರಿಯನ್ನೂ ನೀಡಿಲ್ಲ, ನ್ಯಾಯಕ್ಕಾಗಿ ನಡೆಯುವ ಈ ಹೋರಾಟದಲ್ಲಿ ತಾಲೂಕಿನ ಎಲ್ಲಾ ಬೀಡಿಕಾರ್ಮಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಬೀಡಿಕಾರ್ಮಿಕರಿಗೆ ಕರೆ ನೀಡಿದ್ದಾರೆ.







