ಸಮ್ಮಿಶ್ರ ಸರಕಾರದಲ್ಲಿ ವೀರಶೈವ-ಲಿಂಗಾಯತರಿಗೆ ಸೂಕ್ತ ಸ್ಥಾನ ನೀಡಲು ಆಗ್ರಹ
ಬೆಂಗಳೂರು, ಮೇ 22: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯ ಸಮ್ಮಿಶ್ರ ಸರಕಾರದಲ್ಲಿ ವೀರಶೈವ ಲಿಂಗಾಯತ ಮುಖಂಡರಿಗೆ ಸೂಕ್ತ ಸ್ಥಾನಮಾನ ನೀಡದೆ ಕಡೆಗಣಿಸಿದರೆ ಉಗ್ರ ಹೋರಾಟ ನಡೆಸಲಾಗುತ್ತದೆ ಎಂದು ವೀರಶೈವ ಲಿಂಗಾಯತ ಯುವ ಬ್ರಿಗೇಡ್ ಎಚ್ಚರಿಕೆ ನೀಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೀರಶೈವ ಲಿಂಗಾಯತ ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಬಿ.ಆರ್.ಮಹೇಶ್, ವೀರಶೈವ, ಲಿಂಗಾಯತ ಸಮುದಾಯದ ಮುಖಂಡ ಹಾಗೂ ಜನರನ್ನು ಕಡೆಗಣಿಸಿದರೆ ನಮ್ಮ ಸಮುದಾಯದ ಶಾಸಕರು ರಾಜೀನಾಮೆ ನೀಡಿ, ಬಿಜೆಪಿಯನ್ನು ಬೆಂಬಲಿಸಬೇಕಾಗುತ್ತದೆ ಎಂದು ತಿಳಿಸಿದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಅತಿಹೆಚ್ಚು ಸ್ಥಾನ ಗಳಿಸಿ ಹೊರಹೊಮ್ಮಿದ್ದರೂ ಸರಕಾರ ರಚಿಸಲು ಸಾಧ್ಯವಾಗಿಲ್ಲ. ಇದು ಲಿಂಗಾಯತ, ವೀರಶೈವ ಸಮುದಾಯಕ್ಕೆ ದೊಡ್ಡ ಆಘಾತವಾಗಿದೆ. ಈಗ ಹೊರಹೊಮ್ಮುತ್ತಿರುವ ಸರಕಾರದಲ್ಲಿ ವೀರಶೈವ ಲಿಂಗಾಯತ ನಾಯಕರು ಪ್ರಬಲವಾಗಿದ್ದರೂ ಸಚಿವ ಹಾಗೂ ಇತರೆ ಸ್ಥಾನಗಳಿಗೆ ಬೇಡುವ ಪರಿಸ್ಥಿತಿ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ ಲಿಂಗಾಯತ ಸಮುದಾಯದ ಶಾಸಕರು ಮಾತ್ರವಲ್ಲದೆ ಆ ಸಮುದಾಯದ ಯುವಕರು, ನಾಯಕರು, ಮಠಾಧಿಪತಿಗಳು ಎಲ್ಲರೂ ಸೇರಿ ಹೋರಾಟ ನಡೆಸಿ, ಮುಂದಿನ ನಿರ್ಣಯ ಕೈಗೊಳ್ಳಲಾಗುವುದು. ಹಾಗಾಗಿ ಅದಕ್ಕೆ ಅವಕಾಶ ಕಲ್ಪಿಸದೆ, ಎಲ್ಲರಿಗೂ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಹೇಳಿದರು.







