ಎಂ.ಬಿ.ಪಾಟೀಲ್ ರನ್ನು ಡಿಸಿಎಂ ಮಾಡಲು ಒತ್ತಾಯ

ಎಂ.ಬಿ.ಪಾಟೀಲ್
ಬೆಂಗಳೂರು, ಮೇ 22: ರಾಜ್ಯ ವಿಧಾನಸಭೆ ಚುನಾವಣೆ ನಂತರ ಜಾತ್ಯತೀತ ಶಕ್ತಿಗಳು ಒಂದಾಗಿ ಸರಕಾರ ರಚನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು, ಲಿಂಗಾಯತ ಮುಖಂಡ ಎಂ.ಬಿ.ಪಾಟೀಲ್ ಅವರನ್ನು ಉಪ ಮುಖ್ಯಮಂತ್ರಿ(ಡಿಸಿಎಂ) ಮಾಡಬೇಕೆಂದು ಕರ್ನಾಟಕ ಮುಸ್ಲಿಮ್ ಕೋಆರ್ಡಿನೇಷನ್ ಕಮಿಟಿ ಒತ್ತಾಯಿಸಿದೆ.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯ ಕೆಎಂಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಮಿಟಿ ಅಧ್ಯಕ್ಷ ಸೆಯ್ಯದ್ ಝಮೀರ್ ಪಾಷಾ, ಬಿಜೆಪಿ ರಾಜ್ಯ ಘಟಕದ ಬಿ.ಎಸ್.ಯಡಿಯೂರಪ್ಪಅವರನ್ನು ಸಿಎಂ ಹುದ್ದೆಯಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ವೀರಶೈವ ಮತ್ತು ಲಿಂಗಾಯತ ಸಮುದಾಯಕ್ಕೆ ನೋವಾಗಿದೆ. ಆದ್ದರಿಂದ, ಹೊಸ ಮೈತ್ರಿ ಸರಕಾರದಲ್ಲಿ ಲಿಂಗಾಯತರಿಗೆ ಸೂಕ್ತ ಸ್ಥಾನ ಕಲ್ಪಿಸಬೇಕು ಎಂದು ಹೇಳಿದರು.
ಹೊಸ ಸರಕಾರದಲ್ಲಿ ಎಂ.ಬಿ.ಪಾಟೀಲ್ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕು. ಅವರ ನೇಮಕದಿಂದ ಲಿಂಗಾಯತ ಸಮುದಾಯಕ್ಕೆ ಮಾತ್ರವಲ್ಲದೆ, ಉತ್ತರ ಕರ್ನಾಟಕಕ್ಕೂ ಗೌರವ ನೀಡಿದಂತೆ ಆಗಲಿದೆ ಝಮೀರ್ ಪಾಷಾ ನುಡಿದರು.
ಮಂತ್ರಿಮಂಡಲದಲ್ಲಿ ಮುಸ್ಲಿಮ್ ಸಮಾಜಕ್ಕೂ ರಾಜಕೀಯ ಸ್ಥಾನಮಾನ ಕಲ್ಪಿಸಬೇಕು ಎಂದ ಅವರು, ಜೆಡಿಎಸ್ ಮುಖಂಡ ಬಿ.ಎಂ.ಫಾರೂಕ್ ಅವರಿಗೆ ಮಂತ್ರಿ ಸ್ಥಾನ ನೀಡಬೇಕು. ಜೊತೆಗೆ ಎಲ್ಲ ಸಮುದಾಯಗಳ ಕಲ್ಯಾಣಕ್ಕೆ ಶ್ರಮಿಸಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಮೀರ್ಜಾ ಮುಹಮ್ಮದ್ ಮೆಹದಿ, ಇಬ್ರಾಹಿಂ ಅಹ್ಮದ್ ಜೋಕಟ್ಟೆ ಸೇರಿ ಪ್ರಮುಖರಿದ್ದರು.







