ಬೆಂಗಳೂರು: ಪ್ರತ್ಯೇಕ ರಸ್ತೆ ಅಪಘಾತ; ನಾಲ್ವರು ಮೃತ್ಯು

ಬೆಂಗಳೂರು, ಮೇ 22: ನಗರದ ವಿವಿಧ ಕಡೆ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತ ಪ್ರಕರಣಗಳಲ್ಲಿ ನಾಲ್ವರು ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಯಲಹಂಕ: ಲಾರಿ ಹಾಗೂ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಮೃತಪಟ್ಟಿರುವ ಘಟನೆ ನಡೆದಿದ್ದು, ಮುನಿರಾಜು(40) ಎಂಬಾತ ಮೃತಪಟ್ಟಿದ್ದಾನೆ.
ಯಲಹಂಕ ಉಪನಗರ ನಿವಾಸಿಯಾಗಿರುವ ಮುನಿರಾಜು, ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ನಗರದ ಅರಳಾಳಸಂದ್ರ, ತಿರುಮಲ ಡಾಬಾ ಸಮೀಪದ ದೊಡ್ಡಬಳ್ಳಾಪುರ-ಬೆಂಗಳೂರು ರಸ್ತೆಯಲ್ಲಿ ಅತಿವೇಗವಾಗಿ ಮುನ್ನುಗ್ಗಿದ ಲಾರಿ ಇವರ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಮುನಿರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಯಲಹಂಕ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಈ ಸಂಬಂಧ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.
ಸದಾಶಿವನಗರ: ಸೈಕಲ್‌ನಲ್ಲಿ ತೆರಳುತ್ತಿದ್ದ ವ್ಯಕ್ತಿಗೆ ಅತಿವೇಗವಾಗಿ ಮುನ್ನುಗ್ಗಿದ ಕಾರು ಢಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಮೃತಪಟ್ಟಿದ್ದು, ನಗರದ ಕೆಂಪಾಪುರ ಅಗ್ರಹಾರದ ನಿವಾಸಿ ಎಂದು ಗುರುತಿಸಲಾಗಿದೆ. ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಸದಾಶಿವನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಆರ್‌ಟಿ ನಗರ: ಪಾದಚಾರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದು, ಹೆಸರು ವಿಳಾಸ ತಿಳಿದುಬಂದಿಲ್ಲ. ಸುಮಾರು 45 ವರ್ಷದಂತೆ ಕಾಣುವ ಈ ವ್ಯಕ್ತಿಯ ವಾಸಸ್ಥಳ ಹಾಗೂ ಚಹರೆ ತಿಳಿದುಬಂದಿಲ್ಲ.
ರಾತ್ರಿ 11 ಗಂಟೆ ಸುಮಾರಿಗೆ ಬಿಬಿ ರಸ್ತೆಯ ಸಿಬಿಐ ಬಸ್ ನಿಲ್ದಾಣದ ಬಳಿ ನಡೆದು ಹೋಗುತ್ತಿದ್ದ ಈ ಪಾದಚಾರಿಗೆ ಕಾರು ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಪಾದಚಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಎಂಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ರಾಜಾಜಿನಗರ: ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ಯುವಕನಿಗೆ ಲಾರಿ ಢಿಕ್ಕಿ ಹೊಡೆದ ಪರಿಣಾಮ ಮೃತಪಟ್ಟಿರುವ ದುರ್ಘಟನೆ ಇಲ್ಲಿನ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಪವನ್‌ಕುಮಾರ್(19) ಮೃತಪಟ್ಟ ವ್ಯಕ್ತಿಯಾಗಿದ್ದು, ಇಲ್ಲಿನ ಆರ್‌ಎಂಸಿ ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದ ಇವರು, ಮಂಗಳವಾರ ಮುಂಜಾನೆ 6 ಗಂಟೆ ಸುಮಾರಿಗೆ ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದಾಗ ಲಾರಿ ಢಿಕ್ಕಿ ಹೊಡೆದು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.







