ಬಾಲವನದಲ್ಲಿ ಮಕ್ಕಳ ಬೇಸಿಗೆ ಶಿಬಿರ
ಮಕ್ಕಳಿಗೆ ಮುಕ್ತ ಕಲಿಕಾ ವಾತಾವರಣವಿರಬೇಕು : ಸುಬ್ರಹ್ಮಣ್ಯ ಶಾಸ್ತ್ರಿ

ಪುತ್ತೂರು,ಮೇ 22: ಒತ್ತಡದ ಕಲಿಕೆಯಿಂದ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮಗಳು ಉಂಟಾಗುತ್ತಿದ್ದು, ಇದನ್ನು ತಡೆಯಲು ಪ್ರತಿಯೊಂದು ಮಗುವಿಗೂ ಮುಕ್ತ ಕಲಿಕಾ ವಾತಾವರಣ ಮೂಡಿಸುವ ಕೆಲಸವಾಗಬೇಕು ಎಂದು ನಿವೃತ್ತ ಉಪನ್ಯಾಸಕ ಸುಬ್ರಹ್ಮಣ್ಯ ಶಾಸ್ತ್ರಿ ಹೇಳಿದರು.
ಅವರು ಸೋಮವಾರ ಪುತ್ತೂರಿನ ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನದಲ್ಲಿ ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಂಗಳೂರು, ಶಿಶು ಅಭಿವೃದ್ಧಿ ಯೋಜನೆ ಪುತ್ತೂರು, ತಾಲೂಕು ಬಾಲಭವನ ಸಮಿತಿ ಸಮಿತಿ ವತಿಯಿಂದ 10 ದಿನಗಳು ನಡೆಯುವ ಮಕ್ಕಳ ಉಚಿತ ಬೇಸಿಗೆ ಶಿಬಿರದಲ್ಲಿ ಮಾತನಾಡಿದರು.
ಬಾಲವನದಲ್ಲಿ ನಿರಂತರ ಮಕ್ಕಳ ಚಟುವಟಿಕೆಗಳು ನಡೆಯಬೇಕೆನ್ನುವ ಡಾ. ಶಿವರಾಮ ಕಾರಂತರ ಕನಸು ಇಂತಹ ಶಿಬಿರಗಳ ಮೂಲಕ ಸಕಾರಗೊಳ್ಳುತ್ತವೆ. ಅಲ್ಲದೆ ಮಕ್ಕಳ ಮುಕ್ತ ಕಲಿಗೆ ಉತ್ತಮ ವೇದಿಕೆಯಾಗಿ ಹೊರಹೊಮ್ಮುತ್ತದೆ ಎಂದು ಹೇಳಿದರು
ಶಿಬಿರವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಬಾಲಭವನ ಸಮಿತಿ ಸದಸ್ಯೆ ಗೌರಿ ಬನ್ನೂರು ಅವರು ಮಾತನಾಡಿ ಮಕ್ಕಳ ಬೆಳವಣಿಗೆಗೆ ಪ್ರಕೃತಿ ಅತೀ ಅಗತ್ಯ. ಬಾಲವನದಂತಹ ಪ್ರಕೃತಿಯ ಮಡಿಲಲ್ಲಿ ಬೇಸಿಗೆ ಶಿಬಿರದ ಪ್ರಯೋಜನ ಪಡೆದು ಕೊಳ್ಳುತ್ತಿರುವುದು ಮಕ್ಕಳ ಪುಣ್ಯ ಎಂದರು.
ಸಂಪನ್ಮೂಲ ವ್ಯಕ್ತಿಯಾದ ಪತ್ರಕರ್ತ ಸಂಶುದ್ದೀನ್ ಸಂಪ್ಯ ಅವರು ಮಾತನಾಡಿ ಡಾ. ಶಿವರಾಮ ಕಾರಂತರ ಕರ್ಮಭೂಮಿಯಾದ ಬಾಲವದಲ್ಲಿ ಕಾರಂತರ ಆಶಯದಂತೆ ಮಕ್ಕಳ ಚಟುವಟಿಕೆಗಳು ನಿರಂತರ ನಡೆಯಬೇಕಾಗಿದೆ. ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳುವ ಮೂಲಕ ಕಾರಂತರ ಆಶಯಕ್ಕೆ ರೂಪ ಕೊಡುವ ಕೆಲಸವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಾಡಿದೆ. ಮಕ್ಕಳಿಗೆ ಓದು ಎಂಬುದು ಆಟವಾಗಬೇಕು ಎಂದು ಕಾರಂತರು ಬಯಸಿದ್ದರು. ಶಿಬಿರದಲ್ಲಿ ಆಟದ ಮೂಲಕ ಕಲಿಕೆ ನಡೆಯುತ್ತಿದೆ ಎಂದರು.
ಮಕ್ಕಳ ಸರ್ವತೋಮುಖ ಬೆಳವಣಿಗೆಯಲ್ಲಿ ತನ್ನದೇ ಆದ ರೀತಿಯ ಕೊಡುಗೆ ನೀಡುತ್ತಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಪ್ರತಿ ಹಂತದಲ್ಲಿಯೂ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಚಿಂತನೆ ನಡೆಸುತ್ತಿದೆ. ಅದಕ್ಕೆ ಪೂರಕವಾಗಿ ಪ್ರತಿವರ್ಷ ಬೇಸಿಗೆ ಶಿಬಿರವನ್ನು ನಡೆಸುತ್ತಿದೆ ಎಂದರರು.
ಸಂಪನ್ಮೂಲ ವ್ಯಕ್ತಿಯಾದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ರೋಹಿಣಿ ರಾಘವ ಆಚಾರ್ಯ, ಬಾಲವನದ ಮೇಲ್ವಿಚಾರಕ ಪದ್ಮನಾಭ ಕೋಚಕಟ್ಟೆ ಉಪಸ್ಥಿತರಿದ್ದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಹೆಗಡೆ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮೇಲ್ವಿಚಾರಕಿಯರಾದ ವನಿತಾ ವಂದಿಸಿ, ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಮೇ.31ರ ತನಕ ನಡೆಯಲಿರುವ ಉಚಿತ ಬೇಸಿಗೆ ಶಿಬಿರದಲ್ಲಿ 5 ರಿಂದ 16 ವರ್ಷದ 50 ಮಂದಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದಾರೆ.







