ನಾಗರಿಕ ವಿಮಾನಗಳಿಗೆ ತೆರೆದ ಪಾಸಿಘಾಟ್ ವಿಮಾನ ನಿಲ್ದಾಣ
ಪಾಸಿಘಾಟ್, ಮೇ 22: ಸೋಮವಾರದಂದು ಏರ್ ಇಂಡಿಯ ಸಂಸ್ಥೆಯ ವಿಮಾನವು ಮೊಟ್ಟಮೊದಲ ಬಾರಿ ಭೂಸ್ಪರ್ಶ ಮಾಡುವ ಮೂಲಕ ಅರುಣಾಚಲ ಪ್ರದೇಶದ ಪಾಸಿಘಾಟ್ ವಿಮಾನ ನಿಲ್ದಾಣವು ನಾಗರಿಕ ವಿಮಾನಗಳಿಗೆ ತೆರೆಯಲ್ಪಟ್ಟಿತು.
ಏರ್ ಇಂಡಿಯದ ಅಂಗಸಂಸ್ಥೆ ಅಲಯನ್ಸ್‌ನ ವಿಮಾನದಲ್ಲಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪ್ರೇಮ ಖಂಡು ಗುವಾಹಟಿಯಿಂದ ಪಾಸಿಘಾಟ್‌ಗೆ ಪ್ರಯಾಣಿಸುವ ಮೂಲಕ ಈ ನಿಲ್ದಾಣದಲ್ಲಿ ಇಳಿದ ಪ್ರಥಮ ಪ್ರಯಾಣಿಕರಾದರು. ಪಾಸಿಘಾಟ್ ವಿಮಾನ ನಿಲ್ದಾಣದಲ್ಲಿ ಈ ಹಿಂದೆ ಕೇವಲ ಸೇನೆಯ ಮತ್ತು ವಾಯುಪಡೆಯ ವಿಮಾನಗಳು ಮಾತ್ರ ಇಳಿಯಲು ಅವಕಾಶವಿತ್ತು. ಅಲಯನ್ಸ್ ವಿಮಾನ ಇಲ್ಲಿ ಇಳಿಯುವ ಮೂಲಕ ಸ್ವಾತಂತ್ರ ಬಳಿಕ ಇಂಡೊ-ಚೀನಾ ಗಡಿಯ ಕೇವಲ ಮುನ್ನೂರು ಕಿ.ಮೀ ಅಂತರದಲ್ಲಿ ಇಳಿದ ಮೊಟ್ಟಮೊದಲ ನಾಗರಿಕ ವಿಮಾನ ಎಂಬ ಖ್ಯಾತಿಗೆ ಒಳಗಾಗಿದೆ. ಗುವಾಹಟಿಯಿಂದ ಪಾಸಿಘಾಟ್‌ಗೆ 650 ಕಿ.ಮೀ ಅಂತರವಿದ್ದು ವಿಮಾನದ ಪ್ರತಿ ಟಿಕೆಟ್ ಬೆಲೆ 3,000 ರೂ. ಆಗಿದೆ. ಹಿಂದೆ ಜನರು ಪಾಸಿಘಾಟ್‌ಗೆ ತೆರಳಲು ಗುವಾಹಟಿ ಅಥವಾ ಇಟಾನಗರದಿಂದ ಬಹುತೇಕ ಒಂದಿಡೀ ದಿನ ಪರ್ವತಶ್ರೇಣಿಗಳ ನಡುವೆ ಸಾಗಬೇಕಿತ್ತು. ಪಾಸಿಘಾಟ್‌ನಿಂದ ವಾರದಲ್ಲಿ ಮೂರು ಬಾರಿ ವಿಮಾನ ಪ್ರಯಾಣಿಕರನ್ನು ಹೊತ್ತು ಗಗನಕ್ಕೆ ಹಾರಲಿದೆ. ಮೊದಲ ಹಂತದಲ್ಲಿ ಮಂಗಳವಾರ, ಗುರುವಾರ ಮತ್ತು ಶನಿವಾರದಂದು ವೈಮಾನಿಕ ಸೇವೆ ಲಭ್ಯವಿದೆ ಎಂದು ಪಾಸಿಘಾಟ್ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.





