456.63 ಕೋಟಿ ರೂ. ಸಾಲ ಬಾಕಿ: ರೊಟೊಮ್ಯಾಕ್ ವಿರುದ್ಧ ಸಿಬಿಐ ಚಾರ್ಜ್‌ಶೀಟ್

ಲಕ್ನೊ, ಮೇ 22: ಬ್ಯಾಂಕ್ ಆಫ್ ಬರೋಡದಲ್ಲಿ 456.63 ಕೋಟಿ ರೂ. ಸಾಲ ಬಾಕಿಯಿಟ್ಟಿರುವ ರೊಟೊಮ್ಯಾಕ್ ಪ್ರೈ.ಲಿನ ಮಾಲಕರ ವಿರುದ್ಧ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದೆ.
ರೊಟೊಮ್ಯಾಕ್ ಸಂಸ್ಥೆ ಬ್ಯಾಂಕ್ ಆಫ್ ಬರೋಡಕ್ಕೆ ಪಾವತಿಸಲು ಬಾಕಿಯಿರುವ 456.63 ಕೋಟಿ ರೂ. ಏಳು ಬ್ಯಾಂಕ್‌ಗಳ ಸಮೂಹಕ್ಕೆ ಸಂಸ್ಥೆಯು ಬಾಕಿಯಿಟ್ಟಿರುವ 3,690 ಕೋಟಿ ರೂ. ಸಾಲದ ಭಾಗವಾಗಿದೆ. ಮೂರು ತಿಂಗಳ ತನಿಖೆಯ ನಂತರ ಸಿಬಿಐ ರೊಟೊಮ್ಯಾಕ್ ವಿರುದ್ಧ ಲಕ್ನೊದ ವಿಶೇಷ ನ್ಯಾಯಾಲಯದಲ್ಲಿ ಚಾರ್ಜಶೀಟ್ ಸಲ್ಲಿಸಿದೆ.
ಈ ಪ್ರಕರಣದಲ್ಲಿ ವಂಚಿಸಲಾಗಿರುವ ಉಳಿದ ಮೊತ್ತದ ಬಗ್ಗೆ ತನಿಖೆ ಮುಂದುವರಿದಿದ್ದು ಇನ್ನಷ್ಟು ಚಾರ್ಜ್‌ಶೀಟ್‌ಗಳನ್ನು ಸಲ್ಲಿಸುವ ಸಾಧ್ಯತೆಯಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಈ ಚಾರ್ಜ್‌ಶೀಟ್‌ನ ವಿಚಾರಣೆಯನ್ನು ಸಿಬಿಐ ನ್ಯಾಯಾಧೀಶ ಎಂ.ಪಿ ಚೌಧರಿ ಮೇ 30ಕ್ಕೆ ನಡೆಸುವುದಾಗಿ ತಿಳಿಸಿದ್ದಾರೆ. ಸಿಬಿಐ ತನ್ನ ದೋಷಾರೋಪ ಪಟ್ಟಿಯಲ್ಲಿ ರೊಟೊಮ್ಯಾಕ್‌ನ ಮುಖ್ಯ ವ್ಯವಸ್ಥಾಪನಾ ನಿರ್ದೇಶಕ ವಿಕ್ರಂ ಕೊಠಾರಿ, ಅವರ ಮಗ ಮತ್ತು ನಿರ್ದೇಶಕ ರಾಹುಲ್ ಕೊಠಾರಿ, ಬ್ಯಾಂಕ್ ಆಫ್ ಬರೋಡದ ಆಗಿನ ಸಹಾಯಕ ಪ್ರಧಾನ ಪ್ರಬಂಧಕ ಎಸ್.ಕೆ ಉಪಧ್ಯಾಯ್, ಬ್ಯಾಂಕ್‌ನ ಆಗಿನ ಹಿರಿಯ ಪ್ರಬಂಧಕ ಓಂ ಪ್ರಕಾಶ್ ಕಪೂರ್ ಮತ್ತು ಆಗಿನ ಬ್ಯಾಂಕ್ ಮ್ಯಾನೇಜರ್ ಶಶಿ ಬಿಶ್ವಾಸ್‌ರನ್ನು ಹೆಸರಿಸಲಾಗಿದೆ. ಸದ್ಯ ನ್ಯಾಯಾಂಗ ಬಂಧನದಲ್ಲಿರುವ ವಿಕ್ರಂ ಮತ್ತು ರಾಹುಲ್ ಕೊಠಾರಿ ಹಾಗೂ ಇತರರ ವಿರುದ್ಧ ಅಪರಾಧಿ ಷಡ್ಯಂತ್ರ, ವಂಚನೆ ಸೇರಿದಂತೆ ಹಲವು ಪ್ರಕರಣಗಳು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ದೂರು ದಾಖಲಿಸಲಾಗಿದೆ.





