ವಿರೋಧ ಪಕ್ಷದ ಅಪಪ್ರಚಾರ, ಅಮಿಷಗಳೇ ನನ್ನ ಸೋಲಿಗೆ ಕಾರಣ: ಮಾಜಿ ಶಾಸಕ ಬಿ.ಸುರೇಶಗೌಡ
ತುಮಕೂರು,ಮೇ.22: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ವಿರೋಧ ಪಕ್ಷಗಳು ಮಾಡಿದ ನಿರಂತರ ಅಪಪ್ರಚಾರ ಮತ್ತು ಮತದಾರರಿಗೆ ಒಡ್ಡಿದ ಅಮಿಷಗಳೇ ನನ್ನ ಸೋಲಿಗೆ ಕಾರಣ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ವಿರೋಧ ಪಕ್ಷಗಳು ಎಷ್ಟೇ ಅಪಪ್ರಚಾರ ನಡೆಸಿದರೂ ಶೇ 03 ರಷ್ಟು ಮತಗಳ ಅಂತರದಲ್ಲಿ ಕ್ಷೇತ್ರದ ಜನರು ನನ್ನ ಕೈಬಿಟ್ಟಿದ್ದಾರೆ. ರಾಜಕಾರಣದಲ್ಲಿ ಘಟಾನುಘಟಿಗಳೇ ಸೋಲನ್ನಪ್ಪಿದ್ದು, ಕ್ಷೇತ್ರದಲ್ಲಿಯೇ ಇದ್ದು ಜನರ ಕಷ್ಟ ಸುಖಃಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ನುಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯಗಳ ಮೇಲೆ ನಂಬಿಕೆ ಇಟ್ಟು ಗೆಲುವು ನನ್ನದೇ ಎಂಬ ಅತಿಯಾದ ಆತ್ಮವಿಶ್ವಾಸವು ಕೂಡ ನನ್ನ ಸೋಲಿಗೆ ಕಾರಣವಿರಬಹುದು. ಇಡೀ ಕ್ಷೇತ್ರದ ಪ್ರತಿ ಗ್ರಾ.ಪಂ.ನ ಎಲ್ಲಾ ಗ್ರಾಮಗಳಿಗೂ ಭೇಟಿ ನೀಡಿ, ಅವರಿಗೆ ಕೇಂದ್ರದ ನರೇಂದ್ರಮೋದಿ ನೇತೃತ್ವದ ಸರಕಾರ ಕೈಗೊಂಡಿರುವ ಜನ ಪರ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಕೊಡಿಸುವುದರ ಜೊತೆಗೆ, ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುವುದೇ ನನ್ನ ಗುರಿ ಎಂದು ಅವರು ತಿಳಿಸಿದರು.
ತುಮಕೂರು ಜಿಲ್ಲೆಯಲ್ಲಿ ಜನರು ಬದಲಾವಣೆವನ್ನು ಬಯಸಿದ್ದಾರೆ ಎನ್ನುವುದು ಈ ಚುನಾವಣೆಯಿಂದ ತಿಳಿಯುತ್ತದೆ. ಗುಬ್ಬಿ ಕ್ಷೇತ್ರವನ್ನು ಹೊರತು ಪಡಿಸಿ ಉಳಿದೆಲ್ಲಾ ಕಡೆ ಹಾಲಿ ಶಾಸಕರು ಸೋಲು ಕಂಡಿದ್ದಾರೆ. ಅಭಿವೃದ್ದಿಯೇ ಮಾನದಂಡ ಎನ್ನುವುದಾದರೆ ಕೆ.ಎನ್.ಆರ್. ಸೋಲುವ ಪ್ರಶ್ನೆಯೇ ಇಲ್ಲ ಎಂದ ಅವರು, ಕೊನೆ ಗಳಿಗೆಯಲ್ಲಿ ಒಕ್ಕಲಿಗ ಸಮುದಾಯವೂ ಜೆಡಿಎಸ್ ಕಡೆಗೆ ವಾಲಿದ್ದರಿಂದ ಸೋಲು ಅನುಭವಿಸಬೇಕಾಯಿತು. ಪಕ್ಷದ ಬೇರೆಯವರ ಷಡ್ಯಂತ್ರವಿಲ್ಲ. ತಮಗೆ ಟಿಕೆಟ್ ಪಡೆದುಕೊಳ್ಳಲು ಆಗದ ನಮ್ಮ ಪಕ್ಷದ ಮುಖಂಡರು ಕ್ಷೇತ್ರದಲ್ಲಿ ನನ್ನ ವಿರುದ್ಧ ಹುನ್ನಾರ ನಡೆಸುವಷ್ಟು ಸಮರ್ಥರೇ ಎಂದು ಪರೋಕ್ಷವಾಗಿ ಸೊಗಡು ಶಿವಣ್ಣ ಅವರನ್ನು ಟೀಕಿಸಿದರು.
ಚುನಾವಣಾಧಿಕಾರಿಗಳ ವೈಫಲ್ಯ: ಗ್ರಾಮಾಂತರದಲ್ಲಿ ಅವ್ಯಾಹತವಾಗಿ ಸೀರೆ, ಬಾಂಡ್‍ಗಳನ್ನು ಹಂಚಲಾಯಿತು. ಚುನಾವಣಾಧಿಕಾರಿಗಳು ನಮ್ಮ ದೂರಿಗೆ ಸ್ಪಂದಿಸಲಿಲ್ಲ. ಚುನಾವಣಾ ಅಕ್ರಮಗಳನ್ನು ತಡೆಯಲಿಲ್ಲ. ಕ್ರಮ ಕೈಗೊಳ್ಳಲಿಲ್ಲ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ ಅವರು, ಮತದಾನಕ್ಕೆ ಇನ್ನೆರಡು ಗಂಟೆ ಇದೇ ಎನ್ನುವಾಗ ಕೆಲ ಪ್ರದೇಶಗಳಲ್ಲಿ ಸೀರೆ, ಮೂಗ್ಬಟ್ಟು ಹಂಚಿದ್ದರಿಂದಲೇ ಮತಗಳು ಪರಿವರ್ತನೆಯಾದವು. ಜೆಡಿಎಸ್ ಗೆಲುವು ಸಾಧಿಸಿತು. ಆದರೂ ಗ್ರಾಮಾಂತರದಲ್ಲಿ ಆಗಿರುವ ಹಿನ್ನಡೆಯನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತೇನೆ ಎಂದರು.
ಗ್ರಾಮಾಂತರ ಕ್ಷೇತ್ರ ನನ್ನ ಕರ್ಮಭೂಮಿ: ನಾನು ಅಧಿಕಾರದಲ್ಲಿದ್ದಷ್ಟು ದಿನ ಕ್ಷೇತ್ರಕ್ಕಾಗಿ ಜನರಿಗಾಗಿ ಕೆಲಸ ಮಾಡಿದವನು. ಮೋಜಿಗಾಗಿ ಥೈಲ್ಯಾಂಡ್, ಶ್ರೀಲಂಕಾಕ್ಕೆ ಹೋದವನಲ್ಲ. ಚುನಾವಣೆಯಲ್ಲಿ ಸೋತೆ ಎನ್ನುವ ಭಾವನೆ ನನ್ನಲ್ಲಿ ಇಲ್ಲ. ಸೋತರೂ ಶಾಸಕನಂತೆಯೇ ಕಾರ್ಯನಿರ್ವಹಿಸುವ ಮೂಲಕ ಮತ್ತೆ ಗೆಲುವಿಗೆ ಹೋರಾಡುತ್ತೇನೆ. ಫಲಿತಾಂಶ ಬಂದ ಮೇಲೆ ನನ್ನ ಬೆಂಬಲಿಸಿದವರ ಮನೆಗೆ ಹೋಗಿ ಅವರೊಂದಿಗೆ ಮಾತನಾಡಿದ್ದೇನೆ. ಅವರೊಂದಿಗೆ ನನ್ನ ಉಸಿರು ಇರುವವರೆಗೆ ಇರುತ್ತೇನೆ. ಯಾವುದೇ ಕಾರಣಕ್ಕೂ ಕ್ಷೇತ್ರ ತೊರೆಯುವ ಮಾತೇ ಇಲ್ಲ. ಲೋಕಸಭಾ ಚುನಾವಣೆಗೂ ಸ್ಪರ್ಧಿಸಲ್ಲ ಎಂದು ಸ್ಪಷ್ಟಪಡಿಸಿದರು.
ನನ್ನ ಮೇಲೆ ನಂಬಿಕೆ ಇಟ್ಟು ಕಳೆದ ಹತ್ತು ವರ್ಷಗಳಿಂದ ನನಗೆ ಮತಹಾಕಿರುವ ಮತದಾರರಿಗೆ ಧನ್ಯವಾದಗಳನ್ನು ತಿಳಿಸಲೇಬೇಕು. ಕ್ಷೇತ್ರದಲ್ಲಿ ನನ್ನ ಅವಧಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅದಕ್ಕೆ ನನಗೆ ತೃಪ್ತಿ ಇದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ,ಸದಸ್ಯರಾದ ಗೂಳೂರು ಶಿವಕುಮಾರ್, ವೈ.ಹೆಚ್.ಹುಚ್ಚಯ್ಯ, ತಾ.ಪಂ.ಅಧ್ಯಕ್ಷ ಗಂಗಾಂಜನೇಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀಶ್, ಸೇರಿದಂತೆ ಇತರರು ಉಪಸ್ಥಿತರಿದ್ದರು.







