ಬೆಂಗಳೂರು: 7ನೆ ವೇತನ ಆಯೋಗ ಜಾರಿಗೆ ಆಗ್ರಹಿಸಿ ಗ್ರಾಮೀಣ ಅಂಚೆ ನೌಕರರಿಂದ ಪ್ರತಿಭಟನೆ
ಬೆಂಗಳೂರು, ಮೇ 22: ಗ್ರಾಮೀಣ ಅಂಚೆ ನೌಕರರಿಗೆ 7ನೆ ವೇತನ ಆಯೋಗವನ್ನು ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ನೇತೃತ್ವದಲ್ಲಿ ನೌಕರರು ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.
ಮಂಗಳವಾರ ಬಸವನಗುಡಿ, ಆರ್.ಟಿ. ನಗರ, ದೊಮ್ಮಲೂರು, ಜಾಲಹಳ್ಳಿ ಕ್ರಾಸ್ ಅಂಚೆ ಕಚೇರಿಗಳಲ್ಲಿ ನೌಕರರು ತಮ್ಮ ಕೆಲಸವನ್ನು ಸ್ಥಗಿತಗೊಳಿಸಿ, ಕಮಲೇಶ್‌ಚಂದ್ರ ಸಮಿತಿ ನೀಡಿರುವ ವರದಿ ಆಧಾರದ ಮೇಲೆ ದೇಶದ ಎಲ್ಲ ಗ್ರಾಮೀಣ ಅಂಚೆ ನೌಕರರಿಗೆ 7ನೆ ವೇತನ ಆಯೋಗವನ್ನು ಸೋಮವಾರದೊಳಗೆ ಸಚಿವ ಸಂಪುಟದಲ್ಲಿ ಅನುಮೋದಿಸಬೇಕೆಂದು ಆಗ್ರಹಿಸಿದರು.
ಭಾರತ ಗ್ರಾಮೀಣ ಅಂಚೆ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಕೆ.ಎಸ್. ರುದ್ರೇಶ್ ಮಾತನಾಡಿ, ನಮ್ಮ ಕೆಲಸ, ವೇತನ, ಇರುವ ಸಮಸ್ಯೆಗಳು, ಒತ್ತಡಗಳು ಇತ್ಯಾದಿಗಳ ಕುರಿತಂತೆ 2016ರ ನ.24ರಂದು ಕೇಂದ್ರಕ್ಕೆ ವರದಿ ಸಲ್ಲಿಸಲಾಯಿತು. ಅದೀಗ ಸಚಿವ ಸಂಪುಟದಲ್ಲಿದ್ದರೂ ವರದಿಯನ್ನು ಜಾರಿಮಾಡದೆ ಲಕ್ಷಾಂತರ ಉದ್ಯೋಗಿಗಳ ಜೀವನಕ್ಕೆ ಅಭದ್ರತೆ ಸೃಷ್ಟಿಸಿದೆ ಎಂದು ಆರೋಪಿಸಿದರು.
ಕೇಂದ್ರ ಸರಕಾರಿ ನೌಕರರೆಲ್ಲರಿಗೂ 7ನೆ ವೇತನ ಆಯೋಗ ಜಾರಿಯಾಗಿದೆ. ಇದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಅಂಚೆ ನೌಕರರಿಗೂ ಅನ್ವಯವಾಗಿದೆ. ಆದರೆ 2.65 ಲಕ್ಷ ಗ್ರಾಮೀಣ ಅಂಚೆ ನೌಕರರಿಗೆ ಮಾತ್ರ ಈ ಯೋಜನೆ ಜಾರಿಯಾಗಿಲ್ಲ. ಇತರೆ ಅಂಚೆ ನೌಕರರಿಗಿಂತ ಗ್ರಾಮೀಣ ಅಂಚೆ ನೌಕರರು ಹೆಚ್ಚು ಕೆಲಸ ಮಾಡುವವರಾಗಿದ್ದಾರೆ. ಆದರೂ ನಮಗೆ ಯಾವುದೆ ಸೌಲಭ್ಯಗಳೂ ಇಲ್ಲ. ಯಾವುದೆ ಸಾಮಾಜಿಕ ಭದ್ರತೆಯೂ ನಮಗಿಲ್ಲ ಎಂದು ರುದ್ರೇಶ್ ತೀವ್ರ ಬೇಸರ ವ್ಯಕ್ತಪಡಿಸಿದರು.
ಸೋಮವಾರದೊಳಗೆ ಗ್ರಾಮೀಣ ಅಂಚೆ ನೌಕರರಿಗೆ 7ನೆ ವೇತನ ಆಯೋಗ ಜಾರಿಗೊಳಿಸದಿದ್ದರೆ ದೇಶಾದ್ಯಂತ ಅಂಚೆ ಸೇವೆಯನ್ನು ಸ್ಥಗಿತಗೊಳಿಸಲಾಗುವುದು. ವೃದ್ಧಾಪ್ಯ ವೇತನ ಸೇರಿದಂತೆ ಎಲ್ಲ ಬಟವಾಡೆಗಳನ್ನು ನಿಲ್ಲಿಸುತ್ತೇವೆ. ಗ್ರಾಮೀಣ ಭಾಗದಲ್ಲಿ ಯಾವುದೇ ಅಂಚೆ ಸೇವೆಗಳನ್ನು ನಡೆಸುವುದಿಲ್ಲ ಎಂದು ನೌಕರರು ಎಚ್ಚರಿಕೆ ನೀಡಿದರು.







