ದಾವಣಗೆರೆ: ಕೆಳಸೇತುವೆ ನಿರ್ಮಾಣ ಕಾಮಗಾರಿ ವಿರುದ್ಧ ಸಂಸದರಿಗೆ ಮನವಿ

ದಾವಣಗೆರೆ,ಮೇ.22: ಜಗಳೂರು ತಾಲೂಕು ದೊಣ್ಣೆಹಳ್ಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 13 ಕ್ಕೆ ಅಡ್ಡಲಾಗಿ ರಾಷ್ಟ್ರೀಯ ಹೆದ್ದಾರಿ ಮೇಲ್ದರ್ಜೆ ಯೋಜನೆಯಡಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕೆಳಸೇತುವೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಇದು ಸಾಕಷ್ಟು ತೊಂದರೆಗೆ ಕಾರಣವಾಗಲಿದೆ ಎಂದು ದೊಣ್ಣೆಹಳ್ಳಿ ಹಾಗೂ ಸುತ್ತಲಿನ ಗ್ರಾಮಸ್ಥರು ಮಂಗಳವಾರ ಸಂಸದ ಜಿ.ಎಂ. ಸಿದ್ದೇಶ್ವರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಗಳೂರು ಪಟ್ಟಣದಿಂದ ಚಳ್ಳಕೆರೆಗೆ ಹೋಗುವ ದೊಣ್ಣೆಹಳ್ಳಿ ಕ್ರಾಸ್ ಬಳಿ ಸರಿಯಾದ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡದೇ ಸದರಿ ಸ್ಥಳದಿಂದ 600 ಮೀಟರ್ ದೂರದಲ್ಲಿ ಸೇತುವೆ ನಿರ್ಮಾಣ ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಉದ್ದೇಶಿಸಿದ್ದಾರೆ. ಇದರಿಂದ ಉದ್ದೇಶ ಈಡೇರುವುದಿಲ್ಲ. ಈ ಹಿನ್ನೆಲೆಯಲ್ಲಿ ಸೂಕ್ತ ಸ್ಥಳದಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಹೆದ್ದಾರಿ ಪ್ರಾಧಿಕಾರದವರಿಗೆ ನಿರ್ದೇಶನ ನೀಡುವಂತೆ ಕೋರಿದರು. ಅಲ್ಲದೇ ಮೂಡಲಮಾಚಿಕೆರೆ ಗ್ರಾಮಕ್ಕೆ ಹೋಗಲು ಸಹ ಸೇತುವೆ ನಿರ್ಮಾಣಕ್ಕೆ ಅವಕಾಶ ಕಲ್ಪಿಸಿಲ್ಲ. ಇದರಿಂದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತದೆ ಎಂದು ವಿವರಿಸಿದರು. ಈ ಸಮಯದಲ್ಲಿ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರಿಗೆ ದೂರವಾಣಿ ಮೂಲಕ ಸಂಪರ್ಕಿಸಿದ ಸಂಸದರು ವಿವರ ಪಡೆದರು.
ವಿವರಣೆಯಿಂದ ತೃಪ್ತರಾಗದ ಸಂಸದರು ಖುದ್ದು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸುವುದಾಗಿ ತಿಳಿಸಿದರು. ವೀಕ್ಷಣೆ ಸಮಯದಲ್ಲಿ ಹೆದ್ದಾರಿ ಪ್ರಾದಿಕಾರದ ಅಧಿಕಾರಿಗಳ ಜೊತೆ ಗುತ್ತಿಗೆದಾರರು ಹಾಜರಿರುವಂತೆ ಸಂಸದರು ಸೂಚನೆ ನೀಡಿದರು. ವೀಕ್ಷಣೆ ಮಾಡುವ ಸಮಯದಲ್ಲಿ ಗ್ರಾಮಸ್ಥರು ಹಾಜರಿದ್ದು ತೊಂದರೆಗಳನ್ನು ವಿವರಿಸುವಂತೆ ಸಂಸದರು ಗ್ರಾಮಸ್ಥರಿಗೆ ತಿಳಿಸಿದರು.
ಹೊನ್ನಾಳಿ ತಾಲ್ಲೂಕಿನ ಮುಕ್ತೇನಹಳ್ಳಿ ಗ್ರಾಮದವರು ಗ್ರಾಮದಲ್ಲಿ ರಂಗಮಂದಿರ ನಿರ್ಮಾಣದ ಅವಶ್ಯಕತೆಯಿದ್ದು, ಸಂಸದರ ಅನುದಾನದಲ್ಲಿ ರಂಗಮಂದಿರ ನಿರ್ಮಾಣ ಮಾಡಿಸಿಕೊಡುವಂತೆ ಕೋರಿಕೊಂಡರು.
ಶಾಸಕ ಎಸ್.ವಿ.ರಾಮಚಂದ್ರಪ್ಪ, ಮಾಜಿ ಶಾಸಕ ಬಿ.ಪಿ.ಹರೀಷ್, ಕೆಂಗಲಹಳ್ಳಿ ಗುರುಮೂರ್ತೆಪ್ಪ, ಸೊಕ್ಕೆ ನಾಗರಾಜ್, ಚಟ್ನಳ್ಳಿ ರಾಜಪ್ಪ, ದೊಣ್ಣೆಹಳ್ಳಿ ಶಶಿಧರ್, ಗಡಿಮಾಕುಂಟೆ ಸಿದ್ದೇಶ್, ದೊಣ್ಣೆಹಳ್ಳಿ ನಾಗರಾಜ್, ಹಿರೇಮಲ್ಲನಹೊಳೆ ರೇವಣ್ಣ ಇತರರು ಹಾಜರಿದ್ದರು.







