ಮಡಿಕೇರಿ: ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಗ್ರಾಮೀಣ ಅಂಚೆ ನೌಕರರಿಂದ ಧರಣಿ

ಮಡಿಕೇರಿ,ಮೇ.22: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ನೌಕರರ ಸಂಘ ಮಡಿಕೇರಿ ನಗರ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಎಐಜಿಡಿಎಸ್ ಸಮಿತಿ ನೀಡಿರುವ ವರದಿಯನ್ನು ಸೇರ್ಪಡೆ ಮಾಡಿ ಅದನ್ನು ಜಾರಿಗೊಳಿಸಬೇಕು, ಕನಿಷ್ಠ 8 ಗಂಟೆಗಳ ಕೆಲಸ ಖಾಯಂಗೊಳಿಸಬೇಕು, ದೆಹಲಿ ಮತ್ತು ಮದ್ರಾಸ್ ನ್ಯಾಯಾಲಯದ ತೀರ್ಮಾನದಂತೆ ಜಿಡಿಎಸ್ ನೌಕರರಿಗೆ ಪಿಂಚಣಿ ನೀಡಬೇಕು, ಟಾರ್ಗೆಟ್ ಹೆಸರಿನಲ್ಲಿ ನಡೆಯುತ್ತಿರುವ ದೌರ್ಜನ್ಯ ನಿಲ್ಲಿಸಬೇಕು ಎಂದು ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆ ಸಂದರ್ಭ ಆಗ್ರಹಿಸಿದ್ದಾರೆ.
ನಮ್ಮ ಬೇಡಿಕೆಗಳನ್ನು ಸರಕಾರ ಪರಿಶೀಲಿಸಿ ಈಡೇರಿಸಿದರೆ ಸೇವೆಗೆ ಮರಳುತ್ತೇವೆ, ಇಲ್ಲವಾದಲ್ಲಿ ಮುಷ್ಕರ ಮುಂದುರೆಸುವುದು ಅನಿವಾರ್ಯವಾಗಲಿದೆ. ಹಲವು ದಶಕಗಳಿಂದ ಸೇವೆ ಸಲ್ಲಿಸುತ್ತಿದ್ದರೂ ನಮ್ಮ ಬೇಡಿಕೆಗಳು ಈಡೇರಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಕೊಡಗು ಜಿಲ್ಲಾ ಕಾರ್ಯದರ್ಶಿ ಬಿ.ಎಂ.ಮಂಜುನಾಥ್, ಪ್ರಮುಖರಾದ ಸತೀಶ್ ಕೆ.ಎಚ್, ಸುಶೀಲ, ಶಿವಶಂಕರ್ ಹಾಗೂ ಗ್ರಾಮೀಣ ಅಂಚೆ ನೌಕರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.







