ಪುತ್ತೂರು; ಚುನಾವಣಾ ನೀತಿ ಸಂಹಿತೆಯಿಂದಾಗಿ ಸಮಸ್ಯೆ : ನಗರಸಭಾಧ್ಯಕ್ಷರಿಂದ ಜಿಲ್ಲಾಧಿಕಾರಿಗೆ ಮನವಿ
ಪುತ್ತೂರು,ಮೇ 22 : ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಮಳೆಗಾಲದ ಪೂರ್ವ ಸಿದ್ದತೆಗಾಗಿ ಚರಂಡಿ ಹೂಳೆತ್ತುವ ಕೆಲಸದ ಟೆಂಡರ್ ಕರೆಯಲು ಅನುಮೋದನೆ ನೀಡಬೇಕೆಂದು ಆಗ್ರಹಿಸಿ ಪುತ್ತೂರು ನಗರಸಭೆಯ ಅಧ್ಯಕ್ಷೆ ಜಯಂತಿ ಬಲ್ನಾಡು ಅವರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನಲೆಯಲ್ಲಿ ಮಾದರಿ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಪುತ್ತೂರು ನಗರಸಭೆ ವ್ಯಾಪ್ತಿಯ ಮಳೆಗಾಲದ ಪೂರ್ವ ಸಿದ್ದತೆ ಕೆಲಸ ಕಾರ್ಯಗಳು ಸ್ಥಗಿತಗೊಂಡು ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಇದೀಗ ವಿಧಾನ ಪರಿಷತ್ ಚುನಾವಣೆ ಪ್ರಯುಕ್ತ ಮತ್ತೆ ನೀತಿ ಸಂಹಿತೆ ಜೂನ್.12ರ ತನಕ ಮುಂದುವರಿಯಲಿರುವುದರಿಂದ ನಗರಸಭಾ ವ್ಯಾಪ್ತಿಯಲ್ಲಿ ತುರ್ತು ಅವಶ್ಯಕ ಕೆಲಸ ಕಾರ್ಯಗಳನ್ನು ನಡೆಸಲು ತೊಂದರೆ ಆಗಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
ಮೇ ತಿಂಗಳ ಕೊನೆಯ ವೇಳೆಗೆ ಮಳೆ ಪ್ರಾರಂಭವಾಗಲಿದ್ದು, ಮಳೆಗಾಲದ ಮೊದಲು ನಗರಸಭಾ ವ್ಯಾಪ್ತಿಯ ಎಲ್ಲಾ ಚರಂಡಿಗಳ ಹೂಳೆತ್ತಿ ಕೃಕತ ನೆರೆಯನ್ನು ತಪ್ಪಿಸುವ ಕೆಲಸ ಮಾಡಬೇಕಾಗಿದೆ. ಆದರೆ ಚುನಾವಣಾ ನೀತಿ ಸಂಹಿತೆಯಿಂದಾಗಿ ಚರಂಡಿಗಳ ಹೂಳೆತ್ತಿ ಶುಚಿಗೊಳಿಸುವ ಕೆಲಸದ ಟೆಂಡರ್ ಕರೆದು ಗುತ್ತಿಗೆ ನೀಡಿ ಕೆಲಸ ನಡೆಸಲು ಸಮಸ್ಯೆಯಾಗಿರುವುದರಿಂದ ಮಳೆಗಾಲ ಪೂರ್ವ ಸಿದ್ದತೆ ಕಾರ್ಯಗಳಿಗೆ ಅಧ್ಯಕ್ಷರ ಘಟನೋತ್ತರ ಮಂಜೂರಾತಿ ಮೇರೆಗೆ ಟೆಂಡರ್ ಕರೆಯಲು ಅನುಮತಿ ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.







