ಕಬಕ: ಮನೆಗೆ ನುಗ್ಗಿ ಚಿನ್ನಾಭರಣ ನಗದು ಕಳವು
ಪುತ್ತೂರು,ಮೇ 22; ಮನೆಯೊಂದರಲ್ಲಿ ಯಾರೂ ಇಲ್ಲದ ಸಮಯದಲ್ಲಿ ಬೀಗ ಒಡೆದು ಚಿನ್ನಾಭರಣ ಹಾಗೂ ನಗದು ಹಣವನ್ನು ಕಳ್ಳರು ದೋಚಿದ ಪ್ರಕರಣ ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ಮಂಗಳವಾರ ಬೆಳಕಿಗೆ ಬಂದಿದೆ.
ಪುತ್ತೂರು ಗ್ರಾಮಾಂತರ ಪ್ರದೇಶವಾಗಿರುವ ಕಬಕದ ಅಬ್ದುಲ್ ರಹಿಮಾನ್ ಎಂಬವರ ಮನೆಗೆ ಕಳ್ಳರು ನುಗ್ಗಿದ್ದು, ಮೂರುವರೆ ಪವನ್ ನ ಒಂದು ನೆಕ್ಲೇಸು ಹಾಗೂ ರೂ.60 ಸಾವಿರ ನಗದನ್ನು ಕಳ್ಳರು ದೋಚಿದ್ದಾರೆ.
ಮನೆಯ ಯಜಮಾನ ಅಬ್ದುಲ್ ರಹಿಮಾನ್ ಕಳೆದ 2 ದಿನಗಳ ಹಿಂದೆ ಬೆಂಗಳೂರಿಗೆ ಹೋಗಿದ್ದು, ಇವರ ಪತ್ನಿ ಮತ್ತು ಮಗ ಮಾತ್ರ ಮನೆಯಲ್ಲಿದ್ದರು. ಆದಿತ್ಯವಾರದಂದು ಸಂಜೆ ಇವರು ಸಾಲ್ಮರದ ಸಂಬಂಧಿಕರ ಮನೆಗೆ ಹೋಗಿದ್ದರು. ಸೋಮವಾರ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲಿನ ಬೀಗ ಒಡೆದಿತ್ತು. ಬೆಡ್ ರೂಂನಲ್ಲಿದ್ದ ಮೂರುವರೆ ಪವನ್ ನ ಚಿನ್ನದ ನೆಕ್ಲೇಸ್ ಹಾಗೂ ರೂ.60 ಸಾವಿರ ನಗದು ಹಣ ಕಾಣೆಯಾಗಿತ್ತು.
ಈ ಬಗ್ಗೆ ಅಬ್ದುಲ್ ರಹಿಮಾನ್ ರವರ ಪುತ್ರ ತಾಹೀರ್ ನಗರಠಾಣೆಗೆ ದೂರು ನೀಡಿದ್ದು, ಶ್ವಾನದಳ ಹಾಗೂ ಬೆರಳು ಮುದ್ರೆ ತಜ್ಞರು ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ನಗರಠಾಣೆಯ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.





