ಸ್ವಯಂಚಾಲಿತ ವಿಷಕಾರಕ ಅನಿಲಶೋಧಕ ಯಂತ್ರ ಸಂಶೋಧನೆ

ಬಂಟಕಲ್ಲು, ಮೇ 22: ಮುಕ್ತ ಪ್ರದೇಶಗಳಲ್ಲಿ ಘನತ್ಯಾಜ್ಯಗಳ ನಿಕ್ಷೇಪ ಮತ್ತು ಸಾರ್ವಜನಿಕ ಶೌಚಾಲಯಗಳ ನೈರ್ಮಲ್ಯ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಗರಾಡಳಿತಕ್ಕೆ ಸಹಕಾರಿಯಾಗುವ ಸಾಧನದ ಮಾದರಿಯೊಂದನ್ನು ಬಂಟಕಲ್ಲಿನ ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಗಣಕಯಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ.
ಕಾಲೇಜಿನ ಗಣಕಯಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಮನೋಜ್ ಟಿ. ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಅದಿತ್ಯ ಶೆಟ್ಟಿ, ಗ್ಲಾನಿಸ್ ಜೋಯಲ್ ಮೊಂತೇರೊ, ಮರೀಟ ರೀಮ ಡಿಸೋಜ, ಪ್ರಜ್ಞಾ ಯು. ನಾಯಕ್ ಈ ಸಾಧನವನ್ನು ನಿರ್ಮಿಸಿದ್ದಾರೆ. ಈ ಸಾಧನದ ಮೂಲಕ ದುರ್ಗಂಧಯುಕ್ತವಾದ ಮತ್ತು ವಿಷಕಾರಿ ಅನಿಲಗಳನ್ನು ತ್ಯಾಜ್ಯದಲ್ಲಿ ಪತ್ತೆ ಹಚ್ಚಿ ವಿಶ್ಲೇಷಿಸಬಹುದಾಗಿದೆ.
ಈ ಸಾಧನದ ಕಾರ್ಯಶೈಲಿಯಲ್ಲಿ ಮಾಹಿತಿ ಸಂಗ್ರಹ, ಮಾಹಿತಿ ವಿಶ್ಲೇಷಣೆ, ಮತ್ತು ಮಾಹಿತಿ ರವಾನೆ ಎಂಬ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ತ್ಯಾಜ್ಯ ಸಂಗ್ರಹೀತವಾದ ಸ್ಥಳ ಅಥವಾ ಶೌಚಾಲಯಗಳಿಂದ ಹೊರಹೊಮ್ಮುವ ವಿಷಕಾರಿ ಅನಿಲಗಳ ಪ್ರಮಾಣ ಮತ್ತು ದುರ್ವಾಸನೆ ಸೂಸುವ ಅನಿಲಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.
ಎರಡನೆ ಹಂತದಲ್ಲಿ ಈ ಅನಿಲಗಳ ನಿರ್ದಿಷ್ಟ ಮಾಹಿತಿ ಮತ್ತು ತ್ಯಾಜ್ಯದಲ್ಲಿರುವ ಪ್ರಮಾಣಗಳನ್ನು ಗ್ರಾಹಕಗಳ ಮೂಲಕ ಕಂಡುಹಿಡಿಯಲಾಗುತ್ತದೆ. ಮೂರನೇ ಹಂತದಲ್ಲಿ ಪೌರಾಡಳಿತಗಾರರಿಗೆ ಮುಂದಿನ ಕ್ರಮ ಜರಗಿಸಲು ಕಳುಹಿಸಲಾಗುತ್ತದೆ. ದೇಶದ ನಾಗರಿಕರಿಗೆ ಸ್ವಸ್ಥ ಜೀವನವೊದಗಿಸುವ ಉನ್ನತ ಉದ್ಧೇಶದ ಭಾರತ ಸರಕಾರದ ಸ್ವಚ್ಚ ಭಾರತ ಅಭಿಯಾನಕ್ಕೆ ಈ ಸಾಧನವು ತನ್ನದೇ ಆದ ಕೊಡುಗೆ ನೀಡುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.







