ಇಲಾಖೆಗಳ ನಡಿಗೆ ರೈತರ ಮನೆ ಬಾಗಿಲಿಗೆ: ಉಡುಪಿ ಜಿಲ್ಲಾಧಿಕಾರಿ
ಉಡುಪಿ, ಮೇ 22: ಕೃಷಿ ಮತ್ತು ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಸಹಯೋಗದಲ್ಲಿ ಜೂನ್ ತಿಂಗಳಲ್ಲಿ ಇಲಾಖೆಗಳ ನಡೆ ರೈತರ ಮನೆ ಬಾಗಿಲಿಗೆ ಕೃಷಿ ಅಭಿಯಾನದ ಮೂಲಕ ಸಮಗ್ರ ಕೃಷಿ ಮಾಹಿತಿಯನ್ನು ಜಿಲ್ಲೆಯ ರೈತರಿಗೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಕೃಷಿ ಅಭಿಯಾನ ಕಾರ್ಯಕ್ರಮದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಜೂ.13ರಿಂದ ಪ್ರಾರಂಭವಾಗುವ ಈ ಅಭಿಯಾನ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೆ ಕೃಷಿ, ತೋಟಗಾರಿಕೆ, ಪಶುಪಾಲನೆ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ತೆರಳಿ ರೈತರಿಗೆ ವಿವಿಧ ಯೋಜನೆಗಳ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಗತ್ಯ ನೆರವು ನೀಡಲಾಗುವುದು ಎಂದರು.
ರೈತರಿಗೆ ಕೃಷಿ ಉತ್ಪಾದಕತೆ ಹೆಚ್ಚಳ, ಹೊಸ ತಾಂತ್ರಿಕತೆಯ ಪರಿಚಯ, ಯಂತ್ರೋಪಕರಣಗಳ ಬಳಕೆ, ಕೃಷಿ ವಿಜ್ಞಾನಿಗಳ ಜೊತೆ ಸಂವಾದ, ಕೃಷಿ ವಸ್ತು ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ರೈತರಿಗೆ ಹಣ್ಣು ಮತ್ತು ತರಕಾರಿ ಬೆಳೆಗಳನ್ನು ಬೆಳಯುವ ಕುರಿತು ತೋಟಗಾರಿಕಾ ಇಲಾಖೆಯಿಂದ ಅಗತ್ಯ ಪ್ರೊತ್ಸಾಹ ನೀಡಬೇಕು. ತಾರಸಿ ತೋಟ ನಿರ್ಮಾಣದ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕು ಎಂದು ಅವರು ಹೇಳಿದರು.
ಪ್ರಗತಿಪರ ರೈತರ ಅನುಭವಗಳ ಹಂಚಿಕೆ, ಮಣ್ಣು ಪರೀಕ್ಷೆ, ಕೃಷಿ ವಿಜ್ಞಾನಿ ಗಳಿಂದ ವೈಜ್ಞಾನಿಕ ಕೃಷಿ ಮತ್ತು ನೂತನ ಸಂಶೋಧನೆಗಳ ಕುರಿತು ರೈತರಿಗೆ
ಮಾಹಿತಿ ಕಾರ್ಯಕ್ರಮ ಏರ್ಪಡಿಸಬೇಕು. ಕೃಷಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳು ತಮ್ಮ ಇಲಾಖೆಗಳ ವಿವಿಧ ಯೋಜನೆಗಳ ಕುರಿತು ಮಾಹಿತಿ ಪುಸ್ತಕಗಳನ್ನು ಮತ್ತು ಸ್ಥಬ್ಧಚಿತ್ರಗಳನ್ನು ಮತ್ತು ವಸ್ತು ಪ್ರದರ್ಶನವನ್ನು ಈ ಅಭಿ ಯಾನ ಕಾರ್ಯಕ್ರಮದಲ್ಲಿ ಆಯೋಜಿಸಲಾುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಚಂದ್ರಶೇಖರ್ ನಾಯಕ್, ತೋಟಗಾರಿಕೆ, ಪಶುಪಾಲನೆ ಹಾಗೂ ಇತರೆ ಇಲಾಖಾಧಿಕಾರಿಗಳು ಉಪ ಸ್ಥಿತರಿದ್ದರು.







