ರಕ್ತದೊತ್ತಡದ ಮಟ್ಟವನ್ನು ಮನೆಯಲ್ಲೇ ನಿಖರವಾಗಿ ಅಳೆಯುವುದು ಹೇಗೆ?
ಮನೆಯಲ್ಲಿಯೇ ಡಿಜಿಟಲ್ ಬಿ.ಪಿ.ಮಾನಿಟರ್ ಬಳಸಿ ತಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳುವ ಹೆಚ್ಚಿನ ಅಧಿಕ ರಕ್ತದೊತ್ತಡ ರೋಗಿಗಳಿಗೆ ಕಾಡುವ ದೊಡ್ಡ ಸಮಸ್ಯೆಯೆಂದರೆ ತಪ್ಪು ರೀಡಿಂಗ್‌ಗಳು. ಮಾನಿಟರ್ ತೋರಿಸುವ ರಕ್ತದೊತ್ತಡದ ಮಟ್ಟವು ವೈದ್ಯರ ವರದಿಯಲ್ಲಿನ ರಕ್ತದೊತ್ತಡ ಮಟ್ಟಕ್ಕಿಂತ ಹೆಚ್ಚಾಗಿರುತ್ತದೆ ಅಥವಾ ಕಡಿಮೆಯಾಗಿರುತ್ತದೆ. ಹೀಗಾಗಿ ಅವರಿಗೆ ತಮ್ಮ ರಕ್ತದೊತ್ತಡ ಮಟ್ಟವನ್ನು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ವೈದ್ಯರು ಮನೆಯಲ್ಲಿಯೇ ಮಾನಿಟರ್ ಬಳಸಿ ಆಗಾಗ್ಗೆ ರಕ್ತದೊತ್ತಡ ಪರೀಕ್ಷಿಸಿಕೊಳ್ಳುವಂತೆ ನಿಮಗೆ ಸೂಚಿಸಿದ್ದರೆ ನಿಮ್ಮ ಮಾನಿಟರ್‌ನ್ನು ವೈದ್ಯರ ಕ್ಲಿನಿಕ್‌ಗೆ ಒಯ್ಯುವುದು ನೀವು ಮೊದಲು ಅಗತ್ಯವಾಗಿ ಮಾಡಬೇಕಾದ ಕೆಲಸವಾಗಿರುತ್ತದೆ.
ಕ್ಲಿನಿಕ್‌ನಲ್ಲಿ ವೈದ್ಯರು ಅಥವಾ ನರ್ಸ್ ತಮ್ಮ ಉಪಕರಣದಿಂದ ನಿಮ್ಮ ರಕ್ತದೊತ್ತಡವನ್ನು ಪರೀಕ್ಷಿಸಿದ ನಂತರ ನಿಮ್ಮ ಮಾನಿಟರ್‌ನ್ನು ಬಳಸಿ ಮತ್ತೊಮ್ಮೆ ರಕ್ತದೊತ್ತಡವನ್ನು ಪರೀಕ್ಷಿಸಿ ಅದರ ರೀಡಿಂಗ್‌ನ್ನು ಬರೆದುಕೊಳ್ಳಿ. ಈಗ ನೀವು ತೆಗೆದ ರೀಡಿಂಗ್‌ನ್ನು ವ್ಯೆದ್ಯರು ತೆಗೆದ ರೀಡಿಂಗ್‌ನೊಡನೆ ಹೋಲಿಸಿ ನೋಡಿ. ವೈದ್ಯರ ವರದಿಗಿಂತ ನಿಮ್ಮ ಮಾನಿಟರ್‌ನ ರೀಡಿಂಗ್ ಹೆಚ್ಚಿದ್ದರೆ ಆ ವ್ಯತ್ಯಾಸವನ್ನು ನೀವು ಪ್ರತಿ ಬಾರಿ ಮನೆಯಲ್ಲಿ ರೀಡಿಂಗ್ ತೆಗೆದುಕೊಂಡಾಗ ಅದರಲ್ಲಿ ಕಳೆಯಿರಿ. ನಿಮ್ಮ ಮಾನಿಟರ್‌ನ ರೀಡಿಂಗ್ ವೈದ್ಯರ ವರದಿಗಿಂತ ಕಡಿಮೆಯಾಗಿದ್ದರೆ ಆ ವ್ಯತ್ಯಾಸವನ್ನು ನೀವು ಮನೆಯಲ್ಲಿ ಪ್ರತಿ ಬಾರಿ ರೀಡಿಂಗ್ ತೆಗೆದುಕೊಂಡಾಗ ಅದಕ್ಕೆ ಸೇರಿಸಿ. ಇದರಿಂದ ನಿಮಗೆ ನಿಖರವಾದ ಫಲಿತಾಂಶ ದೊರೆಯುತ್ತದೆ.
ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ನಿಮ್ಮ ಮಾನಿಟರ್‌ನ್ನು ಕ್ಲಿನಿಕ್‌ಗೆ ಒಯ್ದು ವೈದ್ಯರ ಬಳಿ ರಕ್ತದೊತ್ತಡ ತಪಾಸಣೆ ಮಾಡಿಸಿಕೊಂಡು ವ್ಯತ್ಯಾಸವನ್ನು ಸರಿಹೊಂದಿಸಿಕೊಳ್ಳಿ.
ಮನೆಯಲ್ಲಿ ರಕ್ತದೊತ್ತಡ ತಪಾಸಣೆ ಮಾಡಿಕೊಳ್ಳುವಾಗ ಇತರ ಸಾಮಾನ್ಯ ತಪ್ಪುಗಳನ್ನು ನಿವಾರಿಸಿ ನಿಖರವಾದ ಫಲಿತಾಂಶ ಪಡೆಯಲು ಕೆಲವು ಟಿಪ್ಸ್ ಇಲ್ಲಿವೆ.....
►ನಿಮ್ಮ ಕೈಗಳಿಗೆ ಏನಾದರೂ ಆಧಾರವಿರಲಿ. ಅದನ್ನು ಹಿಡಿದುಕೊಳ್ಳುವುದು ಅಥವಾ ಜೋಲು ಬಿಡುವುದನ್ನು ಮಾಡಬೇಡಿ.
ನಿಮ್ಮ ಮುಂಗೈಯನ್ನು ಮೇಜಿನ ಮೇಲೆ ಸಮಾನಾಂತರವಾಗಿ ಇಡಿ ಮತ್ತು ಮೇಲ್ದೋಳು ತೀರ ಕೆಳಗೂ ಅಥವಾ ತೀರ ಮೇಲೂ ಇರಬಾರದು.
► ಕುಳಿತುಕೊಳ್ಳುವಲ್ಲಿ ಸೋಮಾರಿತನ ಬೇಡ
ಕುರ್ಚಿಯಲ್ಲಿ ನೆಟ್ಟಗೆ ಕುಳಿತುಕೊಳ್ಳಿ ಮತ್ತು ನಿಮ್ಮ ಬೆನ್ನಿಗೆ ಆಧಾರವಿರಲಿ. ಪಾದಗಳನ್ನು ನೆಲದ ಮೇಲೆ ಸಮಾನಾಂತರವಾಗಿ ಇರಿಸಿಕೊಳ್ಳಿ. ರಕ್ತದೊತ್ತಡ ತಪಾಸಣೆಯ ಸಂದರ್ಭ ಕಾಲುಗಳನ್ನು ಜೋತು ಬಿಡುವುದನ್ನಾಗಲೀ,ಒಂದರ ಮೇಲೆ ಇನ್ನೊಂದನ್ನು ಇಟ್ಟುಕೊಳ್ಳುವುದನ್ನಾಗಲೀ ಮಾಡಬೇಡಿ. ನೀವು ಹಾಸಿಗೆಯ ಮೇಲೆ ಮಲಗಿದ್ದರೆ ನಿಮ್ಮ ತೋಳು ಹೃದಯದ ಮಟ್ಟಕ್ಕೆ ಮೇೀಲಿರುವಂತೆ ದಿಂಬನ್ನು ಆಧಾರವಾಗಿಟ್ಟುಕೊಳ್ಳಿ.
► ತಪ್ಪು ಗಾತ್ರದ ಕಫ್ ಬಳಸಬೇಡಿ
ಬೆರಳು ಅಥವಾ ಮಣಿಕಟ್ಟಿನ ಬದಲು ತೋಳಿಗೆ ಸುತ್ತುವ ಪಟ್ಟಿ ಅಥವಾ ಕಫ್‌ನೊಂದಿಗಿರುವ ಮಾನಿಟರ್‌ನ್ನೇ ಬಳಸಿ. ಈ ಪಟ್ಟಿ ಸಾಕಷ್ಟು ಅಗಲವಿರಲಿ.
► ಪಟ್ಟಿಯನ್ನು ನಿಮ್ಮ ಶರ್ಟ್‌ನ ತೋಳಿನ ಮೆಲೆ ಸುತ್ತಬೇಡಿ. ಅದನ್ನು ಬರಿದೋಳಿನ ಮೇಲೆ ಸುತ್ತಿ.
ಪಟ್ಟಿಯನ್ನು ಸುತ್ತಿಕೊಂಡ ಬಳಿಕ ರಕ್ತದೊತ್ತಡವನ್ನು ಪರೀಕ್ಷಿಸುವ ಮುನ್ನ ಕೆಲವು ನಿಮಿಷಗಳ ಸುಮ್ಮನೆ ಕುಳಿತುಕೊಳ್ಳಿ.
► ರಕ್ತದೊತ್ತಡ ಪರೀಕ್ಷೆಗೆ ಮುನ್ನ ನಿತ್ಯದ ಔಷಧಿಗಳ ಸೇವನೆಯನ್ನು ತಪ್ಪಿಸಬೇಡಿ.
ಕೆಲವರು ಮಾನಿಟರ್‌ನಲ್ಲಿ ರಕ್ತದೊತ್ತಡದ ರೀಡಿಂಗ್‌ನ್ನು ತೆಗೆದುಕೊಳ್ಳುವ ಅಥವಾ ವೈದ್ಯರ ಬಳಿಗೆ ತೆರಳುವ ಮುನ್ನ ಔಷಧಿ ಸೇವನೆಯನ್ನು ತಪ್ಪಿಸುತ್ತಾರೆ,ಇದು ಒಳ್ಳೆಯ ಪರಿಪಾಠವಲ್ಲ. ಯಾವಾಗಲೂ ನಿಮ್ಮ ವೈದ್ಯರು ಸೂಚಿಸಿರುವಂತೆ ಔಷಧಿಗಳನ್ನು ಸೇವಿಸಿ,ಅದನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಿಸಿಕೊಳ್ಳಬೇಡಿ.
► ಮೊದಲ ರೀಡಿಂಗ್‌ನ್ನೇ ಮುಖ್ಯ ರೀಡಿಂಗ್‌ನ್ನಾಗಿ ಪರಿಗಣಿಸಬೆಡಿ.
ಕನಿಷ್ಠ ಒಂದೆರಡು ನಿಮಿಷಗಳ ಅಂತರದಲ್ಲಿ ಇನ್ನೂ ಎರಡು ರೀಡಿಂಗ್‌ಗಳನ್ನು ತೆಗೆದುಕೊಳ್ಳಿ. ಈ ಮೂರೂ ರೀಡಿಂಗ್‌ಗಳ ಸರಾಸರಿಯನ್ನು ಅಥವಾ ಎರಡು ರೀಡಿಂಗ್‌ಗಳು ಒಂದೇ ಆಗಿದ್ದರೆ ಅದನ್ನು ನಿಮ್ಮ ರಕ್ತದೊತ್ತಡ ಮಟ್ಟ ಎಂದು ಪರಿಗಣಿಸಿ. ನಿಮ್ಮ ರಕ್ತದೊತ್ತಡ ನಿಯಂತ್ರಣದಲ್ಲಿದೆ ಅಥವಾ ಅತಿಯಾಗಿ ಹೆಚ್ಚಿದೆ ಎಂದು ನೀವು ಭಾವಿಸಿದಾಗ ಮಾತ್ರ ಅದನ್ನು ಪರೀಕ್ಷಿಸಬೇಕಿಲ್ಲ. ನಿಖರವಾದ ಫಲಿತಾಂಶಕ್ಕಾಗಿ ಇಷ್ಟ ಬಂದ ವೇಳೆಯಲ್ಲಿ ಪರೀಕ್ಷಿಸಿ.
► ಮೂತ್ರಕೋಶ ತುಂಬಿದ್ದಾಗ ರಕ್ತದೊತ್ತಡದ ತಪಾಸಣೆ ಬೇಡ.
ಮೂತ್ರ ವಿಸರ್ಜನೆ ಮಾಡಿದ ನಂತರ ಐದು ನಿಮಿಷಗಳ ಕಾಲ ವಿಶ್ರಮಿಸಿಕೊಂಡು ತಪಾಸಣೆಯನ್ನು ಮಾಡಿಕೊಳ್ಳಿ.
► ರಕ್ತದೊತ್ತಡ ತಪಾಸಣೆಯ ವೇಳೆಯಲ್ಲಿ ಮಾತನಾಡುವುದನ್ನು ಅಥವಾ ಚಲನವಲನವನ್ನು ನಿಲ್ಲಿಸಿ.
ಮಾನಿಟರ್‌ನ್ನು ಆನ್ ಮಾಡಿದ ಬಳಿಕ ಮಾತನಾಡುತ್ತಿದ್ದರೆ ರೀಡಿಂಗ್‌ನಲ್ಲಿ ಏರುಪೇರುಗಳಾಗುತ್ತವೆ. ಕಠಿಣ ದೈಹಿಕ ಚಟುವಟಿಕೆಗಳನ್ನು ನಡೆಸಿದ್ದರೆ ಕನಿಷ್ಠ ಒಂದು ಗಂಟೆಯ ಬಳಿಕ ರಕ್ತದೊತ್ತಡವನ್ನು ಪರೀಕ್ಷಿಸಿಕೊಳ್ಳಿ.
► ರಕ್ತದೊತ್ತಡ ತಪಾಸಣೆ ಬೆಳಿಗ್ಗೆ ಎದ್ದ ನಂತರದ ಮೊದಲ ಕಾರ್ಯವಾಗುವುದು ಬೇಡ. ನಿ
ತ್ಯ ಒಂದೇ ಸಮಯದಲ್ಲಿ ರೀಡಿಂಗ್‌ಗಳನ್ನು ತೆಗೆದುಕೊಳ್ಳಿ ಅಥವಾ ಬೆಳಿಗ್ಗೆ ಒಮ್ಮೆ ಮತ್ತು ಸಂಜೆ ಒಮ್ಮೆ ಪರೀಕ್ಷಿಸಿ.
► ಬ್ರೇಕ್‌ಫಾಸ್ಟ್‌ನ ಬಳಿಕ ರಕ್ತದೊತ್ತಡವನ್ನು ತಪಾಸಣೆ ಮಾಡಿಕೊಳ್ಳಿ.
ಉಪ್ಪು ಅಧಿಕವಾಗಿರುವ ಊಟ ಮಾಡಿದ ಅಥವಾ ಚಹಾ ಅಥವಾ ಕಾಫಿ ಸೇವನೆಯ ಬಳಿಕ ಈ ಕೆಲಸ ಮಾಡಬೇಡಿ.
ನೀವು ಮನೆಯಲ್ಲಿ ನಿಮ್ಮ ರಕ್ತದೊತ್ತಡದ ಮೇಲೆ ನಿರಂತರ ನಿಗಾಯಿರಿಸುತ್ತಿದ್ದರೂ ವೈದ್ಯರ ಬಳಿ ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುವದು ಅಗತ್ಯ ಎನ್ನುವುದನ್ನು ಮರೆಯಬೇಡಿ. ತೀವ್ರ ತಲೆನೋವು, ಉದ್ವೇಗ, ಉಸಿರಾಟದ ತೊಂದರೆ ಅಥವಾ ಎದೆನೋವಿನಂತಹ ಅಧಿಕ ರಕ್ತದೊತ್ತಡದ ಸಮಸ್ಯೆಗಳು ಕಂಡು ಬಂದಾಗಲೂ ವೈದ್ಯರ ಭೇಟಿ ಅಗತ್ಯವಾಗುತ್ತದೆ.