ತಳಂಗರೆ ಶಿಲಾಶಾಸನ ಸಂರಕ್ಷಿಸಲು ಅಧ್ಯಾಪಕ ಸಂಘದಿಂದ ಶಾಸಕರಿಗೆ ಮನವಿ

ಕಾಸರಗೋಡು, ಮೇ 23: ಸುಮಾರು 10ನೇ ಶತನಮಾನದ ಜಯಸಿಂಹ ಅರಸನ ಆಳ್ವಿಕೆಗೆ ಸಂಬಂಧಿಸಿದ ಮತ್ತು ಕನ್ನಡ ಭಾಷೆ, ಸಾಹಿತ್ಯ ಹಾಗೂ ಚರಿತ್ರೆಗೆ ಸಂಬಂಧಿಸಿದ ಮಹತ್ವಪೂರ್ಣ ವಿಚಾರಗಳಿಗೆ ಬೆಳಕು ಚೆಲ್ಲುವ ಸುಮಾರು ಸಾವಿರ ವರ್ಷಕ್ಕಿಂತಲೂ ಹಳೆಯದಾದ ತಳಂಗರೆ ಶಾಸನವು ಪುರಾತತ್ತ್ವ ಇಲಾಖೆಯ ಗಮನಕ್ಕೆ ಬಂದಿದ್ದರೂ ಅದು ಬಿಸಿಲು ಮಳೆಗೆ ತೆರೆದಿರುವ ಪ್ರದೇಶದಲ್ಲಿದೆ. ಇದನ್ನು ಆ ಸ್ಥಳದಲ್ಲಿಯೇ ಅಥವಾ ಇತರ ಯಾವುದಾದರೂ ಅಧ್ಯಯನ ಕೇಂದ್ರಕ್ಕೆ ಸ್ಥಳಾಂತರಿಸಿ ಸಂರಕ್ಷಿಸಬೇಕು ಎಂದು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘವು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಅವರನ್ನು ಒತ್ತಾಯಿಸಿದೆ.
ಕಲ್ಲಕಟ್ಟ ಶಾಲಾ ಮುಖ್ಯಶಿಕ್ಷಕ ಶ್ಯಾಮ ಪ್ರಸಾದ್ ಹಾಗೂ ಇತರ ಅಧ್ಯಾಪಕ ತಂಡವು ಇತ್ತೀಚೆಗೆ ಶಾಸನವನ್ನು ಕಾಣಲು ತಳಂಗರೆಗೆ ಭೇಟಿ ನೀಡಿತ್ತು. ಅದು ತೆರೆದ ಸ್ಥಳದಲ್ಲಿರುವುದನ್ನು ಗಮನಿಸಿದ್ದರು.
ಎಫಿಗ್ರಾಫಿಯಾದಲ್ಲಿರುವ ಶಾಸನದ ಇಂಗ್ಲಿಷ್ ಪಾಠಾಂತರವನ್ನು ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ರವೀಂದ್ರನಾಥ ಬಲ್ಲಾಳ್ ಅವರು ಶಾಸಕರಿಗೆ ಬುಧವಾರ ಹಸ್ತಾಂತರಿಸಿದರು. ಕಾಸರಗೋಡು ಕಾಲೇಜು ಕನ್ನಡ ವಿಭಾಗ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಶಾಸನದ ಮಹತ್ವವನ್ನು ಶಾಸಕರಿಗೆ ತಿಳಿಸಿದರು.
ಕಲ್ಲಕಟ್ಟ ಎಂಎಯುಪಿ ಶಾಲೆಯ ಮುಖ್ಯಶಿಕ್ಷಕ ಶ್ಯಾಮ್ ಪ್ರಸಾದ್, ಅದೇ ಶಾಲೆಯ ಅಧ್ಯಾಪಕ ವಿನೋದ್‌ರಾಜ್, ಈ ಮುಂತಾದವರು ಶಾಸನ ಈಗಿರುವ ಸ್ಥಳ ಮತ್ತು ಅದರ ಸ್ಥಿತಿಗತಿಗಳ ಬಗ್ಗೆ ಶಾಸಕರಿಗೆ ವಿವರಿಸಿದರು. ಎಡನೀರು ಸರಕಾರಿ ಹಿರಿಯ ಪ್ರೌಢಶಾಲೆಯ ಅಧ್ಯಾಪಕ ದಿನೆಶ್ ಬಿ, ಪೈವಳಿಕೆ ಹಿರಿಯ ಪ್ರೌಢಶಾಲೆಯ ಅಧ್ಯಾಪಕ ಚಂದ್ರಶೇಖರ ಡಿ, ಗಮಕ ಕಲಾ ಪರಿಷತ್ ಕಾಸರಗೋಡಿನ ಅಧ್ಯಕ್ಷ ಟಿ ಶಂಕರನಾರಾಯಣ ಭಟ್, ಸಿರಿಚಂದನ ಕನ್ನಡ ಯುವಬಳಗದ ಅಧ್ಯಕ್ಷ ರಕ್ಷಿತ್ ಪಿ ಎಸ್, ಉಪಾಧ್ಯಕ್ಷ ಪ್ರಶಾಂತ ಹೊಳ್ಳ, ಸದಸ್ಯ ಅಜಿತ್ ಶೆಟ್ಟಿ ಬೋವಿಕಾನ ಮತ್ತಿತರರು ಉಪಸ್ಥಿತರಿದ್ದರು.







