ಹನೂರು: ಶಾಸಕ ನರೇಂದ್ರರಿಗೆ ಸಚಿವ ಸ್ಥಾನ ನೀಡುವಂತೆ ಸಿದ್ದರಾಮಯ್ಯ, ಡಿ.ಕೆ.ಶಿ ಗೆ ಮನವಿ

ಹನೂರು,ಮೇ.23: ಕ್ಷೇತ್ರದಿಂದ ಸ್ಪರ್ಧಿಸಿ ಸತತ 3 ಬಾರಿ ಗೆಲುವು ಸಾಧಿಸಿ ಹ್ಯಾಟ್ರಿಕ್ ಸಾಧನೆಗೈದಿರುವ ಶಾಸಕ ನರೇಂದ್ರ ಅವರಿಗೆ ಸಚಿವ ಸ್ಥಾನ ನೀಡುವಂತೆ ಮುಖಂಡರ ನಿಯೋಗ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಹನೂರು ಕ್ಷೇತ್ರದ ಮುಖಂಡರ ತಂಡ ಬೆಂಗಳೂರಿಗೆ ತೆರಳಿ ಮಾಜಿ ಮುಖ್ಯಮಂತ್ರ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕ್ಷೇತ್ರದ ಶಾಸಕ ನರೇಂದ್ರ ಅವರು ಕಳೆದ 10 ವರ್ಷದ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ಕಳೆದ 5 ವರ್ಷದ ಅವಧಿಯಲ್ಲಿಯೇ 3500ಕೋಟಿಗೂ ಹೆಚ್ಚು ಅನುದಾನ ತಂದಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಈ ಬಾರಿ ಸಚಿವರನ್ನಾಗಿಸಿ ಮತ್ತಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಪೂರಕವಾಗಿ ಸ್ಪಂದಿಸಿದ ಮಾಜಿ ಮಉಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಇನ್ನೂ ಚರ್ಚೆ ನಡೆಸಿಲ್ಲ, ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಿದ್ದಾರೆ.
ಇದೇ ನಿಯೋಗ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರನ್ನೂ ಭೇಟಿ ಮಾಡಿ ಸಚಿವ ಪಟ್ಟ ನೀಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಅವರದೇ ದಾಟಿಯಲ್ಲಿ ಉತ್ತರಿಸಿದ ಡಿ.ಕೆ.ಶಿವಕುಮಾರ್ 'ಹನೂರು ಕ್ಷೇತ್ರದ ಶಾಸಕ ನರೇಂದ್ರ ಅವರ ಬಗ್ಗೆ ಯಾರಿಂದಲೂ ರೆಕಮಂಡೇಷನ್ ಬೇಡ. ನನಗೆ ಗೊತ್ತಿದೆ. ನೀವ್ಯಾರು ಇಲ್ಲಿ ಇರುವುದು ಬೇಡ. ನಿಮ್ಮ ಊರುಗಳಿಗೆ ತೆರಳಿ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ನಿಯೋಗದಲ್ಲಿ ಚಾಮುಲ್ ಅಧ್ಯಕ್ಷ ಗುರುಮಲ್ಲಪ್ಪ, ಜಿ.ಪಂ ಸದಸ್ಯ ಬಸವರಾಜು, ಟಿಎಪಿಸಿಎಂಎಸ್ ನಿರ್ದೇಶಕ ಮಾದೇಶ್, ಪ.ಪಂ ಸದಸ್ಯ ರಾಜುಗೌಡ. ಚುನಾವಣಾ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಈಶ್ವರ್, ಉಪ್ಪಾರ ನಿಗಮದ ಅಧ್ಯಕ್ಷ ಶಿವಕುಮಾರ್ ಮುಖಂಡರಾದ ಮಹೇಶ್, ಪಾಳ್ಯ ಕೃಷ್ಣ, ಸೀಗನಾಯಕ ಇನ್ನಿತರರು ಹಾಜರಿದ್ದರು.







