ಹುಷಾರ್... ರೋಹು ಮೀನು ತಿನ್ನುವ ಮುನ್ನ ಇದನ್ನು ಓದಿ !
ಹೊಸದಿಲ್ಲಿ, ಮೇ 24: ದೇಶಾದ್ಯಂತ ಅತ್ಯಂತ ಜನಪ್ರಿಯವಾಗಿರುವ ರೋಹು ಮೀನಿನಲ್ಲಿ ಅಪಾಯಕಾರಿ ಬಹುಔಷಧಿ ಪ್ರತಿರೋಧದ ಬ್ಯಾಕ್ಟೀರಿಯಾಗಳು ಪತ್ತೆಯಾಗಿವೆ. ಇದು ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿದೆ.
ಛತ್ತೀಸ್ಗಢದ ರಾಯಪುರದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯಾಟಿಕ್ ಸ್ಟ್ರೆಸ್ ಮ್ಯಾನೇಜ್ಮೆಂಟ್ ನಡೆಸಿದ ಅಧ್ಯಯನದ ವೇಳೆ ಈ ಆತಂಕಕಾರಿ ಅಂಶ ಬೆಳಕಿಗೆ ಬಂದಿದೆ. ಆಸ್ಪತ್ರೆಗಳಲ್ಲಿ ತಗುಲುವ ಸೋಂಕಿಗೆ ಸಂಬಂಧಿಸಿದ ರೋಗಾಣುಗಳು ರೋಹು ಮೀನಿನಲ್ಲಿ ಇರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ.
ದೇಶದಲ್ಲಿ ವ್ಯಾಪಕವಾಗಿ ಬಳಕೆಯಲ್ಲಿರುವ ಈ ಮೀನಿನ ಪ್ರಬೇಧದ ಅನ್ನನಾಳದಲ್ಲಿ ಈ ರೋಗಾಣು ಇರುವುದು ಮೊಟ್ಟಮೊದಲ ಬಾರಿಗೆ ಪತ್ತೆಯಾಗಿದೆ. ಆಸ್ಪತ್ರೆ ತ್ಯಾಜ್ಯಗಳ ಅಸಮರ್ಪಕ ನಿರ್ವಹಣೆ ಮತ್ತು ಜಲ ಮಾಲಿನ್ಯದಿಂದಾಗಿ ಜಲಚರ ಪರಿಸರ ಮಲಿನವಾಗಿರುವುದನ್ನು ಈ ಅಧ್ಯಯನ ಎತ್ತಿ ತೋರಿಸಿದೆ.
"ಸಂಶೋಧನೆಯಲ್ಲಿ ಕಂಡುಬಂದ ಈ ಅಂಶ ಅತ್ಯಂತ ಭೀಕರ. ಏಕೆಂದರೆ ರೋಹು, ದೇಶದಲ್ಲಿ ಬಳಕೆಯಲ್ಲಿರುವ ಅತ್ಯಂತ ಜನಪ್ರಿಯ ಸಿಹಿನೀರಿನ ಮೀನು ಪ್ರಭೇಧವಾಗಿದೆ. ಗಂಭೀರವಾದ ರೋಗಾಣುಗಳಿಂದ ಇದು ಮಲಿನವಾಗಿರುವುದು ಗಂಭೀರ ಆರೋಗ್ಯ ಸಮಸ್ಯೆಗಳ ಅಪಾಯದ ಮುನ್ಸೂಚನೆ" ಎಂದು ಅಧ್ಯಯನ ಕೈಗೊಂಡ ವಿಜ್ಞಾನಿಗಳ ತಂಡದ ಬಿನೋದ್ ಕುಮಾರ್ ಚೌಧರಿ ಹೇಳಿದ್ದಾರೆ.