ಡಾ.ಜಿ.ಪರಮೇಶ್ವರ್ ರಾಜೀನಾಮೆ ಸ್ವೀಕರಿಸಲು ಸಭಾಪತಿ ಶಂಕರಮೂರ್ತಿ ನಕಾರ!

ಬೆಂಗಳೂರು, ಮೇ 24: ಉಪ ಮುಖ್ಯಮಂತ್ರಿಯಾಗಿ ಪ್ರಯಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲು ಆಗಮಿಸಿದ್ದ ಡಾ.ಜಿ.ಪರಮೇಶ್ವರ್ ಅವರಿಗೆ, ಸಭಾಪತಿ ಡಿ.ಎಚ್.ಶಂಕರಮೂರ್ತಿ ‘ರಾಜೀನಾಮೆ ಸ್ವೀಕರಿಸಲು ಸಾಧ್ಯವಿಲ್ಲ’ ಎಂದು ವಾಪಸ್ ಕಳುಹಿಸಿದರು.
ಗುರುವಾರ ವಿಧಾನಸೌಧದಲ್ಲಿನ ಸಭಾಪತಿ ಡಿ.ಎಚ್.ಶಂಕರಮೂರ್ತಿಯವರು ಕಚೇರಿಗೆ ಡಿಸಿಎಂ ಡಾ.ಜಿ.ಪರಮೇಶ್ವರ್ ತಮ್ಮ ರಾಜೀನಾಮೆ ಪತ್ರದೊಂದಿಗೆ ಆಗಮಿಸಿದ್ದರು. ಆದರೆ, ಶಂಕರಮೂರ್ತಿ, ‘ನಿಮ್ಮ ರಾಜೀನಾಮೆ ಪತ್ರ ಸ್ವೀಕರಿಸಲು ಆಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.
ಇದರಿಂದ ಕ್ಷಣಕಾಲ ವಿಚಲಿತರಾದ ಡಾ.ಪರಮೇಶ್ವರ್ ‘ಕಾರಣವೇನು’ ಎಂದು ಪ್ರಶ್ನಿಸಿದರು. ಇದಕ್ಕೆ ವಿಧಾನ ಪರಿಷತ್ ನಿಯಮಗಳೊಂದಿಗೆ ಸ್ಪಷ್ಟಣೆ ನೀಡಿದ ಶಂಕರಮೂರ್ತಿ, ‘ಶಾಸಕರಾಗಿ ಆಯ್ಕೆಯಾದ ಬಗ್ಗೆ ಗೆಜೆಟ್ ಅಧಿಸೂಚನೆಯಾಗುತ್ತಿದ್ದಂತೆ ಪರಿಷತ್ ಸದಸ್ಯತ್ವ ತಾನಾಗಿಯೇ ಹೋಗುತ್ತದೆ. ಅವರು ಮೇಲ್ಮನೆ ಸದಸ್ಯರಾಗಿ ಉಳಿಯುವುದಿಲ್ಲ. ಹೀಗಾಗಿ ನೀವು ರಾಜೀನಾಮೆ ನೀಡುವ ಪ್ರಮೇಯವೇ ಉದ್ಭವಿಸುವುದಿಲ್ಲ. ಅಲ್ಲದೆ, ನೀವು ರಾಜೀನಾಮೆ ನೀಡಿದರೂ ನಾನು ಅದನ್ನು ಪಡೆದುಕೊಳ್ಳಲು ಅವಕಾಶವೂ ಇಲ್ಲ. ಒಂದು ವೇಳೆ ನೀವು ರಾಜೀನಾಮೆ ನೀಡಿದರೂ ನಾನು ಸ್ಪೀಕರಿಸುವುದಿಲ್ಲ’ ಎಂದು ನಿರಾಕರಿಸಿದರು.
ಇದರಿಂದಾಗಿ ರಾಜೀನಾಮೆ ಪತ್ರದೊಂದಿಗೆ ಬಂದಿದ್ದ ಪರಮೇಶ್ವರ್ ‘ಬಂದ ದಾರಿಗೆ ಸುಂಕವಿಲ್ಲ’ ಎಂಬಂತೆ ಹಿಂದಿರುಗಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಹಿರಿಯ ಮುಖಂಡ ಬೋಸರಾಜು ಹಾಜರಿದ್ದರು.







