ಪುತ್ತೂರು ನಗರಸಭೆ ಡಂಪಿಂಗ್ ಯಾರ್ಡ್: ಉಪವಿಭಾಗಾಧಿಕಾರಿಗಳಿಂದ ಪರಿಶೀಲನೆ

ಪುತ್ತೂರು, ಮೇ 24: ಪುತ್ತೂರು ಸಹಾಯಕ ಆಯುಕ್ತರಾದ ಎಚ್. ಕೆ. ಕೃಷ್ಣಮೂರ್ತಿ ಅವರು ಗುರುವಾರ ನಗರಸಭಾ ವ್ಯಾಪ್ತಿಯಲ್ಲಿನ ಬನ್ನೂರು ಡಂಪಿಂಗ್ ಯಾರ್ಡ್‌ಗೆ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ತ್ಯಾಜ್ಯ ವಿಲೇವಾರಿ ಬಗ್ಗೆ ಸಲಹೆ ಸೂಚನೆ ನೀಡಿದರು.
ಕಳೆದ ವರ್ಷ ಬನ್ನೂರು ಡಂಪಿಂಗ್ ಯಾರ್ಡ್‌ನಲ್ಲಿ ನಡೆದ ಬೆಂಕಿ ದುರಂತದ ಬಳಿಕ ತ್ಯಾಜ್ಯ ರಾಶಿಯ ಮೇಲೆ ಮಣ್ಣು ಸುರಿದು ಸಮತಟ್ಟು ಮಾಡಲಾಗಿದ್ದು, ಈ ಕೆಲಸ ಚೆನ್ನಾಗಿ ನಡೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ನಾನು ಹಲವು ಜಿಲ್ಲೆಗಳಲ್ಲಿ ಡಂಪಿಂಗ್ ಯಾರ್ಡ್ ವೀಕ್ಷಣೆ ಮಾಡಿದ್ದೇನೆ. ಅವೆಲ್ಲದಕ್ಕಿಂತ ಪುತ್ತೂರಿನ ಡಂಪಿಂಗ್ ಯಾರ್ಡ್ ಉತ್ತಮವಾಗಿದೆ ಎಂದು ಶ್ಲಾಘಿಸಿದರು. ಯಾರ್ಡ್‌ನ ಒಂದು ಮೂಲೆಯಲ್ಲಿ ಹೊಂಡವೊಂದನ್ನು ತೆಗೆದು ಕೋಳಿ, ಮೀನು, ಮಾಂಸ ತ್ಯಾಜ್ಯಗಳನ್ನು ಅದರಲ್ಲಿ ಹಾಕುವ ವ್ಯವಸ್ಥೆ ಮಾಡುವಂತೆ ಅವರು ಸೂಚಿಸಿದರು.
ನಗರದ ಕಸ ಸಂಗ್ರಹ ವ್ಯವಸ್ಥೆ ಸರಿಯಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಸ ಸಂಗ್ರಹ ಎಲ್ಲ ಕಡೆಯೂ ಆಗುವಂತೆ ನಿಗಾ ವಹಿಸಬೇಕೆಂದು ಅವರು ನಗರಸಭೆ ಪೌರಾಯುಕ್ತರು ಹಾಗೂ ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಿದರು. ಆರೋಗ್ಯ ನಿರೀಕ್ಷಕರು ಪ್ರತೀ ದಿನ ಬೆಳಗ್ಗೆ 6.30ರಿಂದ ನಗರದೆಲ್ಲೆಡೆ ಸುತ್ತಾಡಿ ಎಲ್ಲ ಕಡೆ ಕಸ ಸಂಗ್ರಹ ಆಗುತ್ತಿದೆಯೇ ಎಂದು ಪರಿಶೀಲಿಸಬೇಕು. ಕಸ ಸಂಗ್ರಹಕ್ಕೆ ಹೊಸ ತಂಡ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ನಗರದ ಎಲ್ಲ ಪ್ರದೇಶಗಳ ಪರಿಚಯ ಮಾಡಿ ಕೊಡಬೇಕು ಎಂದು ಅವರು ನಿರ್ದೇಶನ ನೀಡಿದರು.
ಕಳೆದ ವರ್ಷ ಡಂಪಿಂಗ್ ಯಾರ್ಡ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಸುಮಾರು ಎರಡು ವಾರಗಳ ಕಾಲ ಬೆಂಕಿ ನಂದಿಸಲಾಗದೆ ಬೃಹತ್ ತ್ಯಾಜ್ಯ ರಾಶಿ ಬೆಂಕಿಗೆ ಸುಟ್ಟು ಹೋಗಿತ್ತು. ಈ ಸಂದರ್ಭ ವಿಪರೀತ ಹೊಗೆ ಆವರಿಸಿದ ಕಾರಣ ಪರಿಸರದ ಜನ ಆರೋಗ್ಯ ಸಮಸ್ಯೆಗೂ ತುತ್ತಾಗಿದ್ದರು. ಈ ಸಂದರ್ಭ ಆಗಿನ ಜಿಲ್ಲಾಧಿಕಾರಿ ಜಗದೀಶ್ ಅವರು ಸ್ಥಳಕ್ಕೆ ಭೇಟಿ ನೀಡಿ ಮುಂಜಾಗರೂಕತಾ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದ್ದರು. ಆ ಸಂದರ್ಭದಲ್ಲಿ ಎ.ಸಿ. ಅವರ ನೇತೃತ್ವದ ಸಮಿತಿಯೊಂದನ್ನು ರಚಿಸಿ ಡಂಪಿಂಗ್ ಯಾರ್ಡ್‌ನ ಸಮಸ್ಯೆಗಳ ಬಗ್ಗೆ ತೀವ್ರ ನಿಗಾ ಇರಿಸುವಂತೆ ಸೂಚನೆ ನೀಡಿದ್ದರು. ಆ ಬಳಿಕ ಆಗಿನ ಪುತ್ತೂರು ಎ.ಸಿ. ರಘುನಂದನ ಮೂರ್ತಿ ನೇತೃತ್ವದ ಸಮಿತಿ ಕಾಲಕಾಲಕ್ಕೆ ಡಂಪಿಂಗ್ ಯಾರ್ಡ್ ಪರಿಶೀಲನೆ ನಡೆಸಿದ್ದಲ್ಲದೆ, ಕಳೆದ ಜನವರಿಯಲ್ಲಿ ಪುತ್ತೂರು ಎ.ಸಿ.ಯಾಗಿ ಅಧಿಕಾರ ವಹಿಸಿಕೊಂಡ ಎಚ್.ಕೆ. ಕೃಷ್ಣಮೂರ್ತಿ ಅವರು ಈ ಕಾರ್ಯ ಮುಂದುವರಿಸುತ್ತಿದ್ದಾರೆ.
ಎ.ಸಿ. ನೇತೃತ್ವದ ಸಮಿತಿಯಲ್ಲಿ 11.35 ಲಕ್ಷ ರೂಪಾಯಿ ನಿಧಿ ಇದೆ. ಅದನ್ನು ಬಳಸಿಕೊಂಡು ಡಂಪಿಂಗ್ ಯಾರ್ಡ್ ಸುತ್ತಲಿನ ಆವರಣ ಗೋಡೆಯನ್ನು ಎತ್ತರಿಸಲಾಗುವುದು. ಯಾರ್ಡ್‌ನ ಒಳಗೆ ವಿದ್ಯುತ್ ಸಮಸ್ಯೆ ಇದ್ದು, ಅದನ್ನು ಸರಿಪಡಿಸಲಾಗುವುದು ಎಂದು ಕೃಷ್ಣಮೂರ್ತಿ ಹೇಳಿದರು. ನಗರಸಭೆಯ ಪೌರಾಯುಕ್ತೆ ರೂಪಾ ಶೆಟ್ಟಿ, ಎಂಜಿನಿಯರ್ ಅರುಣ್ ಕುಮಾರ್, ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಶ್ವೇತಾ ಕಿರಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.







