ಜೂ.28 ರಿಂದ ಅಂತಾರಾಷ್ಟ್ರೀಯ ಜವಳಿ ಕೈಗಾರಿಕಾ ಟೆಕ್ನೋಟೆಕ್ಸ್- 2018
ಬೆಂಗಳೂರು, ಮೇ 24: ಅಂತಾರಾಷ್ಟ್ರೀಯ ಜವಳಿ ಕೈಗಾರಿಕಾ ಟೆಕ್ನೋಟೆಕ್ಸ್- 2018 ಜೂ.28ರಿಂದ ಎರಡು ದಿನ ನಡೆಯಲಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಕಾರ್ಯದರ್ಶಿ ಅನಂತ್‌ಕುಮಾರ್ ಸಿಂಗ್ ತಿಳಿಸಿದರು.
ಗುರುವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಕೇಂದ್ರ ಜವಳಿ ಸಚಿವಾಲಯ ಆಯೋಜಿಸಿದ್ದ, ಭಾರತೀಯ ಜವಳಿ ಕೈಗಾರಿಕೆಗಳ ವಾರ್ಷಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮತ್ತು ಜವಳಿಯಲ್ಲಿ ತಾಂತ್ರಿಕತೆ ಸಮ್ಮೇಳನ ಏಳನೆ ಆವೃತ್ತಿ ಇದಾಗಿದ್ದು, ಮುಂಬೈನ ಗೋರೆಗಾಂವ್ ಬಾಂಬೆ ಪ್ರದರ್ಶನ ಕೇಂದ್ರದಲ್ಲಿ ನಡೆಯಲಿದೆ ಎಂದು ಹೇಳಿದರು.
ಜವಳಿ ವಲಯದ ತಾಂತ್ರಿಕ ಅಂಶಗಳ ಕುರಿತು ಚರ್ಚಿಸಲು ದೇಶಿ ಮತ್ತು ವಿದೇಶಿ ಕಂಪೆನಿಗಳಿಗೆ ಸೂಕ್ತ ವೇದಿಕೆಯಾಗಿದ್ದು, ಸುಮಾರು 150ಕ್ಕೂ ಅಧಿಕ ಪ್ರದರ್ಶನಕಾರರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಚೀನಾ, ತೈವಾನ್, ದಕ್ಷಿಣ ಕೋರಿಯಾ ರಾಷ್ಟ್ರಗಳಿಗಾಗಿ ವಿಶೇಷ ಗ್ಯಾಲರಿಗಳನ್ನು ಕಾಯ್ದಿರಿಸಲಾಗಿದೆ ಎಂದರು.
30ಕ್ಕೂ ಅಧಿಕ ರಾಷ್ಟ್ರಗಳಿಂದ ಪಾಲ್ಗೊಳ್ಳುವ 225 ಅಂತಾರಾಷ್ಟ್ರೀಯ ಖರೀದಿದಾರರೊಂದಿಗೆ ಮರು ಖರೀದಿದಾರರು, ಮಾರಾಟಗಾರರ ಸಭೆಯನ್ನು ಏರ್ಪಡಿಸಲಾಗಿದೆ. ವಿವಿಧ ವಲಯಗಳ ಪ್ರಮುಖರು, ಸಮಾಲೋಚಕರು, ಕೃಷಿ ವಿಜ್ಞಾನಿಗಳು, ಸಂಶೋಧಕರು ಭಾಗವಹಿಸಲಿದ್ದಾರೆ ಎಂದು ಅನಂತ್‌ಕುಮಾರ್ ಸಿಂಗ್ ವಿವರಿಸಿದರು.
ಜವಳಿ ಕ್ಷೇತ್ರ ಅಭಿವೃದ್ಧಿಗೊಳಿಸಲು ಅನೇಕ ಯೋಜನೆಗಳನ್ನು ಕೇಂದ್ರ ಮತ್ತು ರಾಜ್ಯ ಸರಕಾರಗಳು ಜಾರಿಗೊಳಿಸಿವೆ. ಆದರೆ, ಇದರ ಲಾಭ ಪಡೆಯಲು ಫಲಾನುಭವಿಗಳು ಮುಂದಾಗುತ್ತಿಲ್ಲ. ಒಂದು ಸಣ್ಣ ಜವಳಿ ಕೈಗಾರಿಕೆ ಹುಟ್ಟು ಹಾಕಲು ರಾಜ್ಯ ಸರಕಾರ ನೀಡುವ ಪ್ರಮಾಣಕ್ಕಿಂತ ಒಂದು ಪಟ್ಟು ಹೆಚ್ಚಿನ ಬಂಡವಾಳ ಕೇಂದ್ರ ಸರಕಾರ ನೀಡಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಸಣ್ಣ ಪ್ರಮಾಣ ಕೈಗಾರಿಕಾ ಸಂಘದ ಅಧ್ಯಕ್ಷ ಹನುಮಂತೇಗೌಡ, ಎಫ್‌ಐಸಿಸಿಐನ ಉಲ್ಲಾಸ್ ಕಾಮತ್ ಸೇರಿ ಪ್ರಮುಖರು ಉಪಸ್ಥಿತರಿದ್ದರು.







