ಮೇ 26 ರಂದು ರಾಜ್ಯ ಸರಕಾರ ಸಚಿವಾಲಯ ಸಂಘದ 'ವಜ್ರ ಮಹೋತ್ಸವ'
ಬೆಂಗಳೂರು, ಮೇ 24: ರಾಜ್ಯ ಸರಕಾರ ಸಚಿವಾಲಯ ಸಂಘದ ‘ವಜ್ರ ಮಹೋತ್ಸವ’ವನ್ನು ಮೇ 26 ರಂದು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.
ಗುರುವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ನಾಗರಾಜ್, ಸಚಿವಾಲಯ ಸಂಘ ಯಶಸ್ವಿಯಾಗಿ ಆರು ದಶಕಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸಮಾರಂಭ ಆಯೋಜಿಸಲಾಗಿದೆ ಎಂದರು.
ಅಂದು ಬೆಳಗ್ಗೆ 11.30ಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರಕಾರದ ಮುಖ್ಯಕಾರ್ಯದರ್ಶಿ ಕೆ. ರತ್ನಪ್ರಭಾ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ವಜ್ರ ಮಹೋತ್ಸವದ ಅಂಗವಾಗಿ ಬೆಳಗ್ಗೆ 10.30 ಕ್ಕೆ ಸುಪ್ರಸಿದ್ದ ಗಾಯಕರಿಂದ ಸುಗಮ ಸಂಗೀತ ಕಾರ್ಯಕ್ರಮ ನಂತರ 2.30 ಕ್ಕೆ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರ ಕಲಾವಿದರಿಂದ ಕನ್ನಡ ನಾಡು, ನುಡಿ ಮತ್ತು ಸಂಸ್ಕೃತಿ ವೈಭವ ಪರಿಚಯಿಸುವ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸಂಜೆ 4 ರಿಂದ ಕನ್ನಡ ಚಲನಚಿತ್ರ ಗೀತೆಗಳು ನಡೆದು ಬಂದ ಹಾದಿ ಹಾಗೂ ಪ್ರಸಿದ್ದ ಹಿನ್ನೆಲೆ ಗಾಯಕರಿಂದ ಸುಮಧುರ ಕನ್ನಡ ಚನಲಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕರ್ನಾಟಕ ಸಚಿವಾಲಯ ಪತ್ರಾಂಕಿತ ಅಧಿಕಾರಿ ಸಂಘ ಸ್ಥಾಪಕ ಎಸ್.ಎನ್.ಕೃಷ್ಣಕುಮಾರ್‌ರನ್ನು ಸನ್ಮಾನಿಸಲಿದ್ದಾರೆ ಎಂದು ಅವರು ಹೇಳಿದರು.







