ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ

ಬೆಂಗಳೂರು, ಮೇ 24: ಮೊಹಮ್ಮದ್ ನಲಪಾಡ್ ಜಾಮೀನು ಅರ್ಜಿಗೆ ವಿಶೇಷ ಸರಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದಾರೆ.
2018ರ ಫೆಬ್ರವರಿಯಿಂದ ಮೊಹಮ್ಮದ್ ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ. ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಹೀಗಾಗಿ, ನಲಪಾಡ್ ಸೆಷನ್ಸ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಗುರುವಾರ ವಿಶೇಷ ಸರಕಾರಿ ಅಭಿಯೋಜಕ ಶ್ಯಾಮ್ ಸುಂದರ್ ಅವರು ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಿದರು. ಮೇ 28ಕ್ಕೆ ಅರ್ಜಿಯ ವಿಚಾರಣೆ ನಡೆಯಲಿದೆ. ಮೊಹಮ್ಮದ್ ನಲಪಾಡ್ ಮೊದಲು ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಲ್ಲಿಸಿದ್ದರು, ಅದು ವಜಾಗೊಂಡಿತ್ತು.
ಬಳಿಕ ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅದು ಸಹ ವಜಾಗೊಂಡಿತ್ತು. ಈಗ ಚಾರ್ಚ್ ಶೀಟ್ ಸಲ್ಲಿಕೆಯಾದ ಬಳಿಕ ಪುನಃ ಜಾಮೀನು ಪಡೆಯಲು ಅರ್ಜಿ ಹಾಕಿದ್ದಾರೆ.
ಫೆ.17ರಂದು ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ವಿದ್ವತ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಪ್ರಕರಣದಲ್ಲಿ ಮೊಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಆರೋಪಿಗಳು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಸಿಬಿ ಪೊಲೀಸರು, 600 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ. ಮೊಹಮ್ಮದ್ ನಲಪಾಡ್, ಅರುಣ್ ಬಾಬು, ಶ್ರೀ ಕೃಷ್ಣ, ಮಂಜುನಾಥ್, ಆಶ್ರಫ್, ಬಾಲಕೃಷ್ಣ, ಅಭಿಷೇಕ್, ನಾಸಿರ್ ಆರೋಪಿಗಳಾಗಿದ್ದಾರೆ.







