ಕೇರಳದಲ್ಲಿ ಹೂಡಿಕೆದಾರರಿಗೆ ಅವಕಾಶ ಮಾಡಿ ಕೊಡಲಾಗುವುದು: ಸಚಿವ ಎ. ಸಿ ಮೊಯ್ದಿನ್

ಕಾಸರಗೋಡು, ಮೇ 24: ಕೇರಳವನ್ನು ಹೂಡಿಕೆದಾರರಿಗೆ ಅವಕಾಶ ಮಾಡಿ ಕೊಡುವ ಮೂಲಕ ಉದ್ಯಮಗಳ ಆರಂಭಕ್ಕೆ ಹಾಗೂ ಪುನಶ್ಚೇತನಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಕೇರಳ ಕೈಗಾರಿಕಾ ಸಚಿವ ಎ. ಸಿ ಮೊಯ್ದಿನ್ ಹೇಳಿದರು.
ಕೇರಳದ ಎಡರಂಗ ಸರಕಾರದ ಎರಡನೇ ವಾರ್ಷಿಕ ದಿನ ಹಾಗೂ ಕಾಸರಗೋಡು ಜಿಲ್ಲೆಯ 24 ನೇ ವಾರ್ಷಿಕ ದಂಗವಾಗಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಹೊಸದಾಗಿ ಉದ್ಯಮ ಆರಂಭಿಸಲು ಅರ್ಜಿ ಸಲ್ಲಿಸಿ ವರ್ಷಗಳ ಕಾಲ ಕಾಯಬೇಕಿಲ್ಲ . ಅರ್ಜಿ ಸಲ್ಲಿಸಿ 30 ದಿನಗಳೊಳಗೆ ಅನುಮತಿ ನೀಡಲು ಕಾನೂನು ತಿದ್ದುಪಡಿ ಮಾಡಲಾಗಿದೆ. ಸಾರ್ವಜನಿಕ ವಲಯದ ಸಂಸ್ಥೆಗಳನ್ನು ಸಂರಕ್ಷಿಸಲಾಗುವುದು. ಎಲ್ಲಾ ವಲಯಗಳಲ್ಲೂ ಜನಪರ ವಾದ ಬದಲಾವಣೆ ತರಲಾಗುವುದು. ಕಣ್ಣೂರು ವಿಮಾನ ನಿಲ್ದಾಣ ಆರಂಭವಾಗುವುದರೊಂದಿಗೆ ಜಿಲ್ಲೆಯ ಅಭಿವೃದ್ಧಿಗೂ ನೆರವಾಗಲಿದೆ ಎಂದು ಸಚಿವರು ಹೇಳಿದರು.
ಕಂದಾಯ ಸಚಿವ ಇ. ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ಪಿ .ಕರುಣಾಕರನ್ ಮುಖ್ಯ ಅಥಿತಿಯಾಗಿ ಉಪಸ್ಥಿತರಿದ್ದರು. ಶಾಸಕ ಎಂ . ರಾಜಗೋಪಾಲ್ , ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ. ಜಿ .ಸಿ ಬಶೀರ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿ ಜೀವನ್ ಬಾಬು ಕೆ . ಸ್ವಾಗತಿಸಿದರು. ಜಿಲ್ಲಾ ವಾರ್ತಾಧಿಕಾರಿ ಇ. ಸುಗತನ್ ವಂದಿಸಿದರು.





