ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ರಕ್ಷಣೆ ನೀಡುವಂತೆ ಮೋದಿ ಸರಕಾರಕ್ಕೆ ವಿಶ್ವಸಂಸ್ಥೆ ಸೂಚನೆ

ಹೊಸದಿಲ್ಲಿ, ಮೇ 24: ಜೀವಬೆದರಿಕೆಯನ್ನು ಎದುರಿಸುತ್ತಿರುವ ಪತ್ರಕರ್ತೆ ರಾಣಾ ಅಯ್ಯೂಬ್‌ಗೆ ತುರ್ತು ಭದ್ರತೆಯನ್ನು ಒದಗಿಸುವಂತೆ ಮೋದಿ ಸರಕಾರಕ್ಕೆ ವಿಶ್ವಸಂಸ್ಥೆಯ ಮಾನವಹಕ್ಕುಗಳ ವಿಭಾಗ ಸೂಚಿಸಿದೆ. ಅಯ್ಯೂಬ್, ಮಕ್ಕಳ ಅತ್ಯಾಚಾರಿಗಳನ್ನು ಬೆಂಬಲಿಸುತ್ತಾರೆ ಮತ್ತು ಮುಸ್ಲಿಮರು ಭಾರತದಲ್ಲಿ ಸುರಕ್ಷಿತವಾಗಿಲ್ಲ ಎಂದಿದ್ದಾರೆ ಎಂದು ಎಪ್ರಿಲ್ 20ರಂದು ಮಾಡಲಾಗಿದ್ದ ದುರುದ್ದೇಶ ಪೂರಿತ ಟ್ವೀಟ್ ಒಂದರಲ್ಲಿ ಹೇಳಲಾಗಿತ್ತು. ಇದರ ಹಿನ್ನೆಲೆಯಲ್ಲಿ ಅಯ್ಯೂಬ್‌ರಿಗೆ ಹಲವು ದ್ವೇಷ ಸಂದೇಶಗಳು ಬಂದಿದ್ದು, ಸಾಮೂಹಿಕ ಅತ್ಯಾಚಾರದ ಬೆದರಿಕೆಗಳೂ ಬಂದಿದ್ದವು. ಅಯ್ಯೂಬ್ ಅವರ ದೂರವಾಣಿ ಸಂಖ್ಯೆ ಮತ್ತು ಮನೆಯ ವಿಳಾಸವನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಹಾಕಲಾಗಿತ್ತು.
ಪತ್ರಕರ್ತೆ ಮತ್ತು ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರನ್ನು 2017ರ ಸೆಪ್ಟೆಂಬರ್‌ನಲ್ಲಿ ಹತ್ಯೆ ಮಾಡಿರುವುದನ್ನು ಉಲ್ಲೇಖಿಸಿದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞರು, ರಾಣಾ ಅಯ್ಯೂಬ್‌ಗೆ ಬಂದಿರುವ ಬೆದರಿಕೆಗಳಿಂದಾಗಿ ಅವರ ಪ್ರಾಣಕ್ಕೆ ಅಪಾಯ ಸಂಭವಿಸಬಹುದೆಂಬ ಭಯ ನಮ್ಮದಾಗಿದೆ ಎಂದು ತಿಳಿಸಿದ್ದಾರೆ. “ಬಹಳ ಸಮಯದಿಂದಲೂ ಒಂದು ಗುಂಪು ತನ್ನ ಮೇಲೆ ನಿಗಾಯಿರಿಸಿತ್ತು” ಎಂದು ತಿಳಿಸಿರುವ ಅಯ್ಯೂಬ್ “ಯಾವ ಕಾರಣಕ್ಕೆ ಅವರು ನನ್ನ ಮೇಲೆ ದ್ವೇಷವನ್ನು ಹೊಂದಿದ್ದಾರೆ ಎಂಬ ಬಗ್ಗೆ ಯಾವುದೇ ಸುಳಿವಿಲ್ಲ” ಎಂದು ತಿಳಿಸಿದ್ದಾರೆ. “ವಿಶ್ವಸಂಸ್ಥೆಯು ನನಗೆ ರಕ್ಷಣೆಯನ್ನು ಒದಗಿಸುವಂತೆ ಹೇಳಿಕೆಯನ್ನು ನೀಡಿರುವುದು ಸಂತಸ ತಂದಿದೆ. ಇದರಿಂದ ನಾನು ಒಂದಷ್ಟು ನಿಟ್ಟುಸಿರು ಬಿಡುವಂತಾಗಿದೆ. ಆದರೆ ಭಾರತ ಸರಕಾರ ನನಗೆ ರಕ್ಷಣೆ ಒದಗಿಸಿದರೆ ಮಾತ್ರ ನಾನು ಸುರಕ್ಷಿತ ಎಂದು ಭಾವಿಸುತ್ತೇನೆ” ಎಂದು ರಾಣಾ ಅಯ್ಯೂಬ್ ತಿಳಿಸಿದ್ದಾರೆ.







